ಓರ್ವ ಸಾಮಾನ್ಯ ವ್ಯಕ್ತಿ ಹಲವರ ದೃಷ್ಟಿಯಲ್ಲಿ ನಾಯಕನಾಗಿ, ಹಿಂದುತ್ವದ ಶಕ್ತಿಯಾಗಿ ರೂಪುಗೊಳ್ಳುವುದೆಂದರೆ ಅದು ಸಾಮಾನ್ಯದ ಮಾತಲ್ಲ.., ನೂರಾರು ಸವಾಲುಗಳು, ಸಾಲು ಸಾಲು ಟೀಕೆ, ಅವಮಾನ ಎಲ್ಲವನ್ನು ಮೆಟ್ಟಿ ನಿಲ್ಲುವವರಿಗಷ್ಟೇ ಅದು ಸಾಧ್ಯ..
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಎಂದರೆ ಅದು ಹಿಂದುತ್ವದ ಹಾಗೂ ಬಿಜೆಪಿಯ ಭದ್ರಕೋಟೆ. ಪುತ್ತೂರಿನಲ್ಲಿ ಏನೇ ಘಟನೆ ನಡೆದರು ಅದರ ಬಿಸಿ ರಾಜ್ಯ, ರಾಷ್ಟ್ರದವರೆಗೂ ತಟ್ಟುತ್ತದೆ. ಮುತ್ತಿನ ನಗರಿಯ ಜನ ಹೇಗೇ ಮುತ್ತಿನಂತೆ ಹೊಳೆಯುತ್ತಿರುತ್ತಾರೋ ಹಾಗೆಯೇ ಅವರ ಅಸಮಾಧಾನವೂ ಅಷ್ಟೇ ತೀಷ್ಣವಾಗಿರುತ್ತದೆ. ಇದೀಗ ಪುತ್ತೂರಿನ ಹಿಂದೂ ಕಾರ್ಯಕರ್ತರು ಅಸಮಾಧಾನಗೊಂಡಿರುವುದು ವಿಧಾನ ಸಭಾ ಚುನಾವಣೆಯ ಪುತ್ತೂರಿನ ಬಿಜೆಪಿ ಅಭ್ಯರ್ಥಿಯ ಆಯ್ಕೆಯ ವಿಷಯವಾಗಿ., ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ಪುತ್ತೂರು ಬಿಜೆಪಿ ಪಾಳಯದಲ್ಲಿ ಅಸಮಾಧಾನದ ಹೊಗೆಯಾಡಲಾರಂಭಿಸಿದೆ.
ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯುವ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆಯಾಗಿದ್ದೇ ತಡ ಕರಾವಳಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಪುತ್ತೂರಿನಲ್ಲಿ ಅರುಣ್ ಪುತ್ತಿಲ ರವರಿಗೆ ಅಭ್ಯರ್ಥಿ ಸ್ಥಾನ ನೀಡಬೇಕೆನ್ನುವುದು ಅವರ ಅಭಿಮಾನಿಗಳ ಆಶಯವಾಗಿತ್ತು. ಅವರಿಗೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.
ಹಿಂದುತ್ವಕ್ಕಾಗಿ ದುಡಿಯುತ್ತಿರುವ ನಾಯಕನಿಗೆ ಟಿಕೆಟ್ ಕೈ ತಪ್ಪಿದ ಬಗ್ಗೆ ಅಸಮಾಧಾನಗೊಂಡ ಕಾರ್ಯಕರ್ತರು ತುರ್ತುಸಭೆಯನ್ನು ಕರೆದಿದ್ದರು. ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪುತ್ತಿಲ ಅಭಿಮಾನಿ ಬಳಗ ಹಾಗೂ ಹಿಂದೂ ಕಾರ್ಯಕರ್ತರು ಅವರನ್ನು ಪಕ್ಷೇತರರಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.
ಕಾರ್ಯಕರ್ತರ ಒತ್ತಾಯದ ಮೇರೆಗೆ ಹಾಗೂ ಹಿಂದುತ್ವದ ಧ್ವನಿಯನ್ನು ಮತ್ತೆ ಮುನ್ನಲೆಗೆ ತರಲು, ಕಾರ್ಯಕರ್ತರ ಭಾವನೆಗೆ ಬೆಲೆ ನೀಡಿ ಅವರ ಪರವಾಗಿ ಕೆಲಸ ನಿರ್ವಹಿಸಲು ಅರುಣ್ ಕುಮಾರ್ ಪುತ್ತಿಲ ರವರು ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷೇತರವಾಗಿ ಸ್ಪರ್ಧಿಸಲಿರುವ ಪುತ್ತಿಲ ರವರ ಪರವಾಗಿ ಕಾರ್ಯ ನಿರ್ವಹಿಸಲು ಸಾವಿರಾರು ಕಾರ್ಯಕರ್ತರು ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ.


























