ಬೆಂಗಳೂರು: ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಪುತ್ರ ಖ್ಯಾತ ಭರತನಾಟ್ಯ ಕಲಾವಿದ, ನಿರ್ದೇಶಕ ವಿದ್ವಾನ್ ರಾಮು ಕಣಗಾಲ್ ಇಂದು ಕೊರೋನಾಗೆ ಬಲಿಯಾಗಿದ್ದಾರೆ.
52 ವರ್ಷ ವಯಸ್ಸಿನ ರಾಮು ಕಣಗಾಲ್, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಅವರು ಕಳೆದ ಐದು ದಿನಗಳಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಕಳೆದ 20 ವರ್ಷಗಳಿಂದ ‘ಕಣಗಾಲ್ ನೃತ್ಯಾಲಯ ಟ್ರಸ್ಟ್’ ಹೆಸರಿನಲ್ಲಿ ನಾಟ್ಯ ಶಾಲೆ ನಡೆಸುತ್ತಿದ್ದ ರಾಮು ಕಣಗಾಲ್, ನೂರಾರು ಮಂದಿಗೆ ಭರತನಾಟ್ಯ ಕಲಿಸಿದ್ದಾರೆ. ತಂದೆ ಪುಟ್ಟಣ್ಣ ಕಣಗಾಲ್ ಅವರನ್ನು ಮರೆಯಲಾಗಿದೆ ಎಂದು ಕಳೆದ ವರ್ಷ ಅಸಮಾಧಾನ ಹೊರಹಾಕಿದ್ದ ಅವರು, ಮದರಾಸಿನಲ್ಲಿ ಓದಿ ಬೆಳೆದಿರುವ ನನಗೆ ನನ್ನ ತಂದೆ ಶಿಸ್ತು ಮತ್ತು ಗೌರವಯುತವಾಗಿ ಬದುಕಲು ಹೇಳಿಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಗೆರೆಯಲ್ಲೇ ಬಾಳುತ್ತಿರುವುದಾಗಿ ಹೇಳಿದ್ದರು.