ಕೊಣಾಜೆ: ತನ್ನ ಫೇಸ್ ಬುಕ್ ಖಾತೆಯಲ್ಲಿ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ತುಚ್ಚವಾಗಿ ಬರೆದಿದ್ದಾನೆ ಎಂದು ಆರೋಪಿಸಿ ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಮುಖಂಡರು ಕೊಣಾಜೆ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ.
ಲುಕ್ಮನ್ ಅಡ್ಯಾರ್ ಎಂಬಾತ ತನ್ನ ಫೇಸ್ ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಏಕವಚನದಲ್ಲಿ ಸಂಭೋದಿಸಿದ್ದಾನೆ. ಅಲ್ಲದೇ ಕೊರೊನಾದಿಂದ ಸತ್ತವರ ಶವದ ಫೋಟೊದ ಜತೆ ದೇಶದಲ್ಲಿ ಜನರು ಈ ರೀತಿ ಸಾಯಲು ಕಾರಣರಾದ ದೇಶದ ಪ್ರಧಾನಿಯೂ ಅವರು ಬೀದಿಬದಿಯಲ್ಲಿ ನರಕಯಾತನೆ ಅನುಭವಿಸಿ ಸಾಯುವಂತಾಗಲು ಎಲ್ಲರು ಪ್ರಾರ್ಥಿಸಬೇಕು ಎಂದು ತನ್ನ ಪೋಸ್ಟ್ ನಲ್ಲಿ ಬರೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವ್ಯಕ್ತಿ ಸ್ವಾತಂತ್ರತ್ರ್ಯದ ಹೆಸರಿನಲ್ಲಿ ಲುಕ್ಮನ್ ಅಡ್ಯಾರ್ ರಂಝಾನ್ ತಿಂಗಳ ಈ ಪವಿತ್ರ ಸಮಯದಲ್ಲಿ ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ವಿಷಬೀಜ ಬಿತ್ತುತ್ತಿದ್ದಾನೆ. ಕೊರೊನಾ ಸಂಕಷ್ಟ ಕಾಲದಲ್ಲಿ ಪವಿತ್ರ ಮೆಕ್ಕಾ ಸೇರಿದಂತೆ ವಿಶ್ವದಾದ್ಯಂತ ಭಾರತ ಒಳಿತಿಗಾಗಿ ಪ್ರಾರ್ಥನೆ ಮಾಡುತಿದ್ದಾರೆ.ಆದರೇ ಲುಕ್ಮನ್ ಇದರ ಮಧ್ಯೆಯೂ ವಿಷ ಬಿತ್ತುತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಅಲ್ಪಸಂಖ್ಯಾತ ವಿಭಾಗ ಮುಖಂಡ ಫಝಲ್ ಅಸೈಗೋಳಿ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯವಾದಿ ಅಸ್ಗರ್ ಅಲಿ ಜತೆಗಿದ್ದರು.