ಮಂಗಳೂರು : ಬಾವಿ ಕಟ್ಟೆಯ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬರು ನಿದ್ರೆ ಮಂಪರಿನಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನಪ್ಪಿದ ಘಟನೆ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ಸಂಭವಿಸಿದೆ.
ಮೃತರನ್ನು ಕಲ್ಲಾಪು ನಿವಾಸಿ ವಾಲ್ಟರ್ ಮೊಂತೆರೋ (65) ಎಂದು ಗುರುತಿಸಲಾಗಿದೆ.

ಈ ಘಟನೆ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಾಲ್ಟರ್ ತೊಕ್ಕೊಟ್ಟಿನ ಚರ್ಚ್ ಗೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡು ಮನೆಗೆ ಹಿಂತಿರುಗಿದ್ದರು.
ರಾತ್ರಿ ಹೊತ್ತಿಗೆ ಮನೆಯಂಗಳದ ಬಾವಿಯ ಕಟ್ಟೆಯಲ್ಲಿ ಕುಳಿತಿದ್ದಾಗ ನಿದ್ರೆಯ ಮಂಪರಿನಿಂದ ಹಠಾತ್ ಆಗಿ ಬಾವಿಯೊಳಗೆ ಬಿದ್ದಿದ್ದಾರೆ. ಕೂಡಲೇ ಮನೆ ಮಂದಿ ಆಳ ಇಲ್ಲದ ಬಾವಿಗೆ ಏಣಿ ಇಳಿಸಿ ವಾಲ್ಟರ್ ಅವರನ್ನ ಮೇಲಕ್ಕೆತ್ತಿದ್ದರು. ತಲೆಗೆ ಗಂಭೀರವಾಗಿ ಏಟಾದ ಪರಿಣಾಮ ಅವರು ಮೃತಪಟ್ಟಿದ್ದಾರೆ.



























