ಚುನಾವಣೆ ಹಿನ್ನೆಲೆಯಲ್ಲಿ ರಸ್ತೆ ಮಾರ್ಗವಾಗಿ ಮಾತ್ರವಲ್ಲದೆ ಸಮುದ್ರದ ಮೂಲಕವೂ ಹಣ, ಹೆಂಡ, ಉಡುಗೊರೆಗಳನ್ನು ಸಾಗಿಸುವ ಅಪಾಯ ವಿರುವುದರಿಂದ ಸಮುದ್ರದಲ್ಲೂ ಅಕ್ರಮ ಗಳನ್ನು ತಡೆಯುವ ಸಲುವಾಗಿ ಕರಾವಳಿ ಕಾವಲು ಪಡೆಯ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ.
ಅಧಿಕೃತವಾಗಿ 159 ಕಡೆ ತಪಾಸಣೆ ನಡೆಸುತ್ತಿದ್ದು, ಇದಲ್ಲದೆ ಇನ್ನು ಕೆಲವು ಕಡೆಗಳಲ್ಲಿಯೂ ನಿಗಾ ವಹಿಸಿದ್ದಾರೆ.
ರಾಜ್ಯಾದ್ಯಂತ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಸಲುವಾಗಿ ವಿವಿಧೆಡೆ ಚೆಕ್ಪೋಸ್ಟ್ಗಳನ್ನು ತೆರೆದು ಅಕ್ರಮ ಗಳನ್ನು ತಡೆಯುವ ನಿಟ್ಟಿನಲ್ಲಿ ನಿಗಾ ವಹಿಸಲಾಗಿದೆ. ಅದೇ ರೀತಿ ಈಗ ಕಾರವಾರದಿಂದ ಕಾಸರಗೋಡಿನವರೆಗಿನ ಕರಾವಳಿ ತೀರದುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ.
ಕರಾವಳಿ ಕಾವಲು ಪಡೆ ಪೊಲೀಸರಿಂದ ಪ್ರತಿ ನಿತ್ಯ ಪ್ಯಾಟ್ರೋಲಿಂಗ್ (ಗಸ್ತು) ತಿರುಗುತ್ತಿದ್ದು, ಚುನಾವಣೆ ಸಮಯದಲ್ಲಿ ಈ ಅವಧಿಯನ್ನು ಹೆಚ್ಚಿಸಲಾಗಿದೆ. ನಿತ್ಯ 3 ಜಿಲ್ಲೆಗಳ ವಿವಿಧ ಕಾವಲು ಪಡೆ ಠಾಣೆಗಳ 12 ಬೋಟ್ಗಳಲ್ಲಿ 5 ರಿಂದ 8 ಗಂಟೆ ಗಸ್ತು ತಿರುಗಲಾಗುತ್ತಿದೆ.


























