ಕಡಬ : ತಾಲೂಕಿನ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಕುಮಾರದಾರ ನದಿಯಲ್ಲಿ ಡ್ರೆಜ್ಜಿಂಗ್ ಮೂಲಕ ಮರಳುಗಾರಿಕೆಯನ್ನು ಅಕ್ರಮವಾಗಿ ಮಾಡುತ್ತಿದ್ದ ಸ್ಥಳಕ್ಕೆ ಕಡಬ ಪೊಲೀಸರು ದಾಳಿ ಮಾಡಿ ಸವಲತ್ತುಗಳನ್ನು ವಶಕ್ಕೆ ಪಡೆದಿರುವ ಘಟನೆ ಮೇ.5 ರಂದು ನಡೆದಿದೆ.

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಅಕ್ರಮವಾಗಿ ಡ್ರಿಜ್ಜಿಂಗ್ ಬಳಸಿ ಮರಳು ತೆಗೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಡಬ ಎಸೈ ಹರೀಶ್ ಸಿಬ್ಬಂದಿಗಳೊಂದಿಗೆ ಘಟನಾ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಡ್ರಿಜ್ಜಿಂಗ್ ಬಳಸಿ ಮರಳು ತೆಗೆಯುತ್ತಿರುವುದು ಕಂಡು ಬಂದಿದೆ.

ಸ್ಥಳದಲ್ಲಿದ್ದ ಒಂದು 4 ಹೆಚ್.ಪಿ. ಮೋಟರು ಅಳವಡಿಸಿರುವ ಡ್ರಿಜ್ಜಿಂಗ್ ಸಹಿತ ಬೋಟ್, ಡ್ರಿಜ್ಜಿಂಗ್ ಮೋಟಾರ್ ಗೆ ಅಳವಡಿಸಿರುವ 6 ಇಂಚು ಸುತ್ತಳತೆಯ 20 ಅಡಿ ಉದ್ದದ ಫೈಬರ್ ಪೈಪು, ಆರು 6 ಇಂಚು ಸುತ್ತಳತೆಯ 20 ಅಡಿ ಉದ್ದದ ಕಬ್ಬಿಣದ ಪೈಪುಗಳು, 14 ಕಬ್ಬಿಣದ ಪೈಪುಗಳಿಗೆ ಅಳವಡಿಸಿದ ಕಬ್ಬಿಣದ ಡ್ರಮ್ ಗಳು, 4*6 ಅಡಿ ಉದ್ದದ ಕಬ್ಬಿಣದ ಜಾಲರಿ, 2 ಮರಳು ತೆಗೆಯಲು ಉಪಯೋಗಿಸುವ ಕಬ್ಬಿಣದ ಕೈ ಗುದ್ದಲಿಗಳು, ಪ್ಲಾಸ್ಟಿಕ್ ಬುಟ್ಟಿ ಇವುಗಳನ್ನು ವಶಕ್ಕೆ ಪಡೆದು ಸ್ಥಳದಲ್ಲಿಯೇ ಮಹಜರ್ ಮಾಡಲಾಗಿದೆ.
ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರು ಗಣಿ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.























