ಮೈಸೂರು: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ದಸರಾ ಗಜಪಡೆಯ ಮಾಜಿ ಕ್ಯಾಪ್ಟನ್ ಬಲರಾಮ ಆನೆ (67) ಸಾವನ್ನಪ್ಪಿದೆ.
ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿದ್ದ ಬಲರಾಮ ಆನೆಯ ಬಾಯಿಯಲ್ಲಿ ಹುಣ್ಣಾಗಿತ್ತು. ಇದರಿಂದ ಆನೆ ಆಹಾರ, ನೀರು ಸೇವಿಸಲು ಆಗದಂತಹ ಸ್ಥಿತಿ ಉಂಟಾಗಿತ್ತು. ಪರಿಣಾಮವಾಗಿ ಬಲರಾಮ ಆನೆ ನಿತ್ರಾಣಗೊಂಡಿತ್ತು. ಆನೆಗೆ ಶಿಬಿರದಲ್ಲೇ ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಆನೆ ಮೃತಪಟ್ಟಿದೆ.
ಬಲರಾಮ ಆನೆ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿ ಮೆರವಣಿಗೆಯಲ್ಲಿ ಬರೋಬ್ಬರಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಖ್ಯಾತಿ ಗಳಿಸಿತ್ತು. ಅತ್ಯಂತ ಸೌಮ್ಯ ಸ್ವಭಾವದ ಆನೆ ಎಂದು ಗಮನ ಸೆಳೆದಿತ್ತು. ಬಲರಾಮ ಆನೆ ಮೇಲೆ ಜನರಲ್ಲಿ ವಿಶೇಷ ಪ್ರೀತಿ ಇತ್ತು.