ಉಪ್ಪಿನಂಗಡಿ : ವ್ಯಕ್ತಿಯೋರ್ವ ಅಪ್ರಾಪ್ತ ಬಾಲಕಿಯ ಮನೆಗೆ ನುಗ್ಗಿ ಅಸಭ್ಯ ರೀತಿಯಲ್ಲಿ ವರ್ತಿಸಿದ ಘಟನೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಮಣಿಕ್ಕಳದಲ್ಲಿ ನಡೆದಿದೆ.
ವಿನಯ ಪೂಜಾರಿ ಆರೋಪಿ.
ಈ ಬಗ್ಗೆ ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿಯು 10ನೇ ತರಗತಿ ಪಾಸಾಗಿ ವಾರ್ಷಿಕ ರಜೆಯಲ್ಲಿ ಮನೆಯಲ್ಲಿ ಇದ್ದು, ಮೇ.9 ರಂದು ಆಕೆಯ ತಾಯಿ ಕೂಡ ಕೆಲಸಕ್ಕೆ ರಜೆ ಮಾಡಿ ಮನೆಯಲ್ಲಿದ್ದು, ಬೆಳಿಗ್ಗೆ ತನ್ನ ಮನೆಯ ಹೊರಗಡೆ ಇರುವಾಗ ಬಾಲಕಿ ಬೊಬ್ಬೆ ಹಾಕುತ್ತಾ ತಾಯಿಯ ಬಳಿಗೆ ಬಂದಾಗ ಆಕೆಯ ಹಿಂದಿನಿಂದ ಪರಿಚಯದ ವಿನಯ ಪೂಜಾರಿ ಎಂಬಾತನು ಕೂಡಾ ಓಡಿಕೊಂಡು ಬಂದಿದ್ದು, ಬಾಲಕಿಯ ಕೈ ಹಿಡಿದು ಎಳೆದಾಡಿದಾಗ ತಾಯಿಯು ಆತನಿಂದ ಬಿಡಿಸಿಕೊಂಡು ಬೊಬ್ಬೆ ಹಾಕಿದಾಗ, ನೆರೆಕರೆಯವರು ಬರುವುದನ್ನು ಕಂಡ ಆತನು ಮಗಳನ್ನು ಮತ್ತು ತಾಯಿಯನ್ನು ಉದ್ದೇಶಿಸಿ ಯಾರಲ್ಲಿಯಾದರೂ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಓಡಿ ಹೋಗಿರುತ್ತಾನೆ.
ತಾಯಿಯು ಬಾಲಕಿಯಲ್ಲಿ ವಿಚಾರಿಸಿದಾಗ, ತಾನು ಅಡುಗೆ ಕೋಣೆಯಲ್ಲಿ ಇರುವಾಗ ಹಿಂದಿನಿಂದ ಅಡುಗೆ ಕೋಣೆಗೆ ಅಕ್ರಮ ಪ್ರವೇಶ ಮಾಡಿ ಬಂದ ಆರೋಪಿ ವಿನಯ ಪೂಜಾರಿ ಎಂಬವನು ತನ್ನನ್ನು ತಬ್ಬಿಕೊಂಡು ಹಿಡಿದು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿದಾಗ, ಬೊಬ್ಬೆಹಾಕಿ ಆತನಿಂದ ತಪ್ಪಿಸಿಕೊಂಡು ಓಡಿ ಬಂದಿರುವುದಾಗಿ ತಿಳಿಸಿದ್ದು, ಅಲ್ಲದೇ ಈ ಹಿಂದೆ ಕೂಡಾ ಆರೋಪಿಯು ಬಾಲಕಿಯ ಕೈಯನ್ನು ಮತ್ತು ಬೆನ್ನು ಹಿಡಿದು ಎಳೆದಾಗ ತಪ್ಪಿಸಿಕೊಂಡಿರುವುದಾಗಿದೆ ತಿಳಿಸಿರುತ್ತಾಳೆ.
ಈ ಬಗ್ಗೆ ಆಕೆಯ ತಾಯಿಯು ಠಾಣೆಗೆ ದೂರು ನೀಡಿದ್ದು, ಅ.ಕ್ರ 54/2023 ಕಲಂ: 448,354(ಎ),506 ಐಪಿಸಿ ಮತ್ತು ಕಲಂ:12 ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

























