ಬೆಳ್ತಂಗಡಿ : ಚುನಾವಣೆಯ ಮುನ್ನಾ ದಿನ ತಡರಾತ್ರಿ ಬಿಜೆಪಿಯವರು ಹಣ ಹಂಚುವುದಕ್ಕೆ ಬಂದಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕರಾದ ಕಾಂಗ್ರೆಸ್ ಮುಖಂಡ ವಸಂತ ಬಂಗೇರ ರವರ ತಂಡ ವಾಹನವನ್ನು ಅಡ್ಡಗಟ್ಟಿದ ಘಟನೆ ನಡೆದಿದೆ.

ಬೆಳ್ತಂಗಡಿಯ ಕೆಲ್ಲಗುತ್ತುವಿನಲ್ಲಿ ಕಾಂಗ್ರೆಸ್ಸಿನವರು ವಾಹನವನ್ನು ಅಡ್ಡಗಟ್ಟಿದ ನಂತರ ಚುನಾವಣೆಯ ಫ್ಲೈಯಿಂಗ್ ಸ್ಕ್ವಾಡ್ ನವರು ಕಾರನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪತ್ತೆಯಾದ 61 ಸಾವಿರ ರೂ ನಗದು ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರಿನಲ್ಲಿದ್ದ ಬೆಳ್ತಂಗಡಿ ನಗರಸಭಾ ಉಪಾಧ್ಯಕ್ಷ ಜಯಾನಂದ ಗೌಡ ಮತ್ತಿತರರ ಮೇಲೆ ಸ್ಥಳದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ವಸಂತ ಬಂಗೇರ, ನ್ಯಾಯವಾದಿ ಸಂತೋಷ್ ಕುಮಾರ್ ಮತ್ತಿತರರು ಕಾರನ್ನು ಅಡ್ಡಗಟ್ಟಿ ಕಾರನ್ನು ಪರಿಶೀಲಿಸಿದರು. ಬಳಿಕ ಪೊಲೀಸರು ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯ ಶರತ್ ಶೆಟ್ಟಿ, ಸಂಕೇತ್ ಶೆಟ್ಟಿಯವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸಿದ್ದಾರೆ.
ಪೊಲೀಸ್ ಠಾಣೆಗೆ ಮಾಜಿ ಶಾಸಕ ವಸಂತ ಬಂಗೇರ ಅವರು ದೂರು ನೀಡಿದರು. ಪೊಲೀಸರು ದೂರು ಸ್ವೀಕರಿಸಿ ಮಹಜರು ಪ್ರಕ್ರಿಯೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.


























