ಪುತ್ತೂರು: ಗ್ರಾಮೀಣ ಪ್ರದೇಶದ ಶಿಕ್ಷಣ ವ್ಯವಸ್ಥೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ತನ್ನದೇ ರೂಪುರೇಷೆಗಳ ಸಮಾಜಮುಖಿ ಕೆಲಸಗಳ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಜನಾನುರಾಗಿಯಾಗಿರುವ ಭಾಗ್ಯೇಶ್ ರೈ ನೇತೃತ್ವದ “ವಿದ್ಯಾಮಾತ ಫೌಂಡೇಶನ್ (ರಿ.)” ಟ್ರಸ್ಟ್ ನ ಪುತ್ತೂರಿನ ಕಚೇರಿಯ ಎರಡನೆಯ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಈ ಶುಭ ಸಂದರ್ಭವನ್ನು ಪುತ್ತೂರು ತಾಲ್ಲೂಕಿನ ಕುರಿಯ ಗ್ರಾಮದ ಇಡೆಬೆಟ್ಟು ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಗೆ ಪ್ರಿಂಟರ್ ಕೊಡುಗೆಯಾಗಿ ಕೊಡುವುದರ ಮೂಲಕ ವಿದ್ಯಾಮಾತದ ಪುತ್ತೂರು ಶಾಖಾ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾದ ವಿಜಯ್ ಬಿ.ಎಸ್ ರವರಿಗೆ ವಿದ್ಯಾಮಾತ ವತಿಯಿಂದ ಅಭಿನಂದಿಸಲಾಯಿತು. ವಿದ್ಯಾಮಾತದ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅಳಕೆಮಜಲು ದೀಪ ಪ್ರಜ್ವಲನೆ ಮಾಡಿ ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
“ವಾರ್ಷಿಕೋತ್ಸವದ ಹೆಸರಿನಲ್ಲಿ ಆಡಂಬರದ ಕಾರ್ಯಕ್ರಮ ಮಾಡದೆ ಒಂದು ಸರಕಾರಿ ಶಾಲೆಗೆ ಪ್ರಿಂಟರ್ ಕೊಡುಗೆ ನೀಡಿದ್ದೇವೆ.. ಕೊರೊನಾ ಸಂದರ್ಭದಲ್ಲಿ ಶಾಲಾ ಚಟುವಟಿಕೆಗಳಿಗೆ ಇದು ಪೂರಕವಾಗಿ ಸಹಾಯವಾಗಲಿ ಎಂಬುದು ನಮ್ಮ ಉದ್ದೇಶ. ಸದ್ಯದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ “ವಿದ್ಯಾಮಾತ ಅಕಾಡಮಿ” ಕೂಡ ಪ್ರಾರಂಭವಾಗಲಿದೆ ಎಂದು ವಿದ್ಯಾಮಾತದ ಸ್ಥಾಪಕ ಅಧ್ಯಕ್ಷ ಭಾಗ್ಯೇಶ್ ರೈ ತಿಳಿಸಿದರು. ಸಿ.ಆರ್.ಪಿ ಅನಂತ್ ವಿದ್ಯಾಮಾತ ಫೌಂಡೇಶನ್ ಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿಕ್ಷಕಿ ಯಶೋಧ ಮತ್ತು ಅಪರ್ಣ ರೈ, ಹರ್ಷಿತಾ ಆಚಾರ್ಯ, ದೇವಿಪ್ರಸಾದ್ ರೈ, ಗಂಗಾಧರ್ ರೈ ಉಪಸ್ಥಿತರಿದ್ದರು