ಪುತ್ತೂರು : ಎರಡು ರಾಷ್ಟ್ರೀಯ ಪಕ್ಷಗಳು ಪಕ್ಷೇತರ ಅಭ್ಯರ್ಥಿಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಭೇಟಿ ಮಾಡಿ ಒತ್ತಡ ಹಾಕಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿದ್ದಾರೆ ಎಂದು ಅರುಣ್ ಕುಮಾರ್ ಪುತ್ತಿಲ ರವರು ಹೇಳಿದರು.

ಸುಭದ್ರ ಸಭಾಭವನದಲ್ಲಿ ನಡೆದ ಗ್ರಾಮ ಮತ್ತು ನಗರ ಬೂತ್ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
‘ಮುಂದಿನ ದಿವಸಗಳಲ್ಲಿ ಉತ್ತರ ಕೊಡುತ್ತೇವೆ’ ಎಂದು ವಿಚಾರದ ಮೂಲಕ ಸಂಘರ್ಷ ಮಾಡುವ ಬೆದರಿಕೆ ಕಾರ್ಯಕರ್ತರಿಗೆ ಒಡ್ಡಿದ್ದಾರೆ. ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಬೆದರಿಸಿದ್ದಾರೆ. ಹಿರಿಯರ ಕಣ್ಣೀರು ಹಾಕಿಸುವ ಕೆಲಸ ಮಾಡಿದ್ದೂ ನಮಗೆ ತಿಳಿದಿದೆ. ಆದರೆ ನನ್ನ ಕಾರ್ಯಕರ್ತರು ಹಣದ ವಿಚಾರಕ್ಕೆ, ಅಧಿಕಾರ, ಬೆದರಿಕೆ ವಿಚಾರಕ್ಕೆ ಮಣಿಯುವುದಿಲ್ಲ. ಎಷ್ಟೇ ಒತ್ತಡದ ನಡುವೆ ನನ್ನ ಜೊತೆಗೆ ನಿಂತಿರುವ ನಿಮ್ಮಜೊತೆ ನನ್ನ ಕೊನೆಯ ಉಸಿರಿರುವ ತನಕ ಇರುತ್ತೇನೆ. ಸಂಘರ್ಷ, ಅವಮಾನ, ಅಪಮಾನಗಳಿಗೆ ಉತ್ತರ ಕೊಡುತ್ತೇನೆ. ಧರ್ಮ ಆಧಾರಿತ ರಾಜಕಾರಣವನ್ನು 5 ವರ್ಷಗಳ ಕಾಲ ಮಾಡುತ್ತೇನೆ ಎಂದು ಹೇಳಿದ ಅವರು, ಅಧಿಕಾರ ಹಣಕಾಸಿನ ವಿಚಾರಕ್ಕೆ ನನ್ನ ಜೊತೆ ಬಂದಿಲ್ಲ. ಆದರೆ ಅನೇಕ ವರ್ಷಗಳಿಂದ ಕಾರ್ಯಕರ್ತರಿಗೆ, ಸಂಘದ ಹಿರಿಯರಿಗೆ, ಪಕ್ಷದ ಹಿರಿಯರಿಗೆ ಮಾಡಿದ ಅವಮಾನ, ಜನತೆಗೆ ಮಾಡಿದ ಮೋಸಕ್ಕೆ ಹೊರತು ಬೇರೆ ಯಾವ ವಿಚಾರಕ್ಕೂ ನಾನು ಚುನಾವಣೆಗೆ ಸ್ಪರ್ಧಿಸಿದ್ದಲ್ಲ ಎಂದು ಅತ್ಯಂತ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಹಾಗಾಗಿ ನಿಶ್ಚಿತವಾಗಿಯೂ ಈ ಬಾರಿಯ ಗೆಲುವು ನಮ್ಮದೆ ಎಂದರು.

ಸಿದ್ಧಾಂತ, ಭದ್ದತೆಯ ಆಧಾರದಲ್ಲಿ ಒಂದು ಸಮಾಜಕ್ಕೆ ಶಕ್ತಿಯನ್ನು ಕೊಡುವ ಕೆಲಸವನ್ನು ನಾವೆಲ್ಲ ಮಾಡೋಣ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಎಲ್ಲಾ ವಿಚಾರಗಳನ್ನು ಕೂಡಾ ಚುನಾವಣೆಯ ನಂತರದ 5 ವರ್ಷಗಳಲ್ಲಿ ಅತ್ಯಂತ ಪ್ರಾಮಾಣಿಕವಾಗಿ ನಿಮ್ಮೆಲ್ಲರ ಸಹಕಾರದೊಂದಿಗೆ ನಾನು ಕೆಲಸ ನಿರ್ವಹಿಸುತ್ತೇನೆ ಎಂಬ ವಿಶ್ವಾಸ ನನಗಿದೆ. ಮುಂದಿನ ಯಾವ ಸಂದರ್ಭದಲ್ಲೂ ನಿಮ್ಮ ಜೊತೆಗೆ ನಾನಿರುತ್ತೇನೆ ಎಂಬ ಆಣೆಯನ್ನು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಪುಣ್ಯ ಭೂಮಿಯಲ್ಲಿ ಮಾಡುತ್ತೇನೆ ಎಂದರು.

ಚುನಾವಣೆಯ ಆರಂಭದಲ್ಲಿ ನಮ್ಮನ್ನು ಗೂಂಡಾಯಿಸಮ್ ಮಾಡುತ್ತಾರೆ ಅವರೊಂದಿಗೆ ಯಾರೂ ಇಲ್ಲ ಎಂದು ಸುಳ್ಳು ಆರೋಪಗಳನ್ನು ಹೊರಿಸಿ ಅವಮಾನ ಮಾಡುವ ಕೆಲಸವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ನಮ್ಮಜೊತೆಗೆ ಕೈ ಹಿಡಿದು ಹೆಜ್ಜೆ ಹಾಕಿದ ವೈದ್ಯರುಗಳು ನಮಗೆ ಪ್ರಾತಃಸ್ಮರಣೀಯರು. ಅವರು ಇಟ್ಟಿರುವ ಹೆಚ್ಚಿ ನಮಗೆ ಭವಿಷ್ಯ ರೂಪಿಸಿದೆ. ನನ್ನ ಜೀವಮಾನದ ಕೊನೆಯ ಕ್ಷಣದವರೆಗೂ ನಾನು ನಿಮ್ಮನ್ನು ಮರೆಯುವುದಿಲ್ಲ ಎಂದು ಡಾ.ಸುರೇಶ್ ಪುತ್ತೂರಾಯ ಮತ್ತು ಡಾ.ಗಣೇಶ್ ಪ್ರಸಾದ್ ಮುದ್ರಾಜೆಯವರಿಗೆ ಹಾಗೂ ಇತರ ವೈದ್ಯರಿಗೆ ಅರುಣ್ ಕುಮಾರ್ ಪುತ್ತಿಲ ಕೃತಜ್ಞತೆ ಸಲ್ಲಿಸಿದರು.
ಡಾ. ಸುರೇಶ್ ಪುತ್ತೂರಾಯ ಅವರು ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದ ಕಾರ್ಯಕರ್ತನಿಗೆ ಅಭಿನಂದನೆಗಳು.ಯಾಕೆಂದರೆ ಕಳೆದ 25 ದಿನಗಳಲ್ಲಿ ನಾನು ನೋಡಿದಂತೆ ಅರುಣ್ಣನಿಗೆ ಇಷ್ಟೊಂದು ಮಂದಿ ಅಭಿಮಾನಿಗಳು ಇದ್ದಾರೆಂದು ನೋಡಿ ಆಶ್ಚರ್ಯವಾಗಿದೆ. ಇದು ಹಿಂದೂ ಸಮಾಜದ ಒಗ್ಗಟ್ಟನ್ನು ನೋಡಿದ ಅನುಭವ ಆಗಿದೆ ಹಾಗಾಗಿ ಯುದ್ಧದಲ್ಲಿ ನಾವು ಜಯಗಳಿಸಿದ ಅನುಭವ ಕೂಡಾ ಆಗಿದೆ ಎಂದರು.
ಮನೀಶ್ ಕುಲಾಲ್ ಹುಟ್ಟುಹಬ್ಬ ಆಚರಣೆ :
ಕಾರ್ಯಕ್ರಮದ ಕೊನೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರೊಂದಿಗೆ ಕಳೆದ ಕೆಲ ವರ್ಷಗಳಿಂದ ಜೊತೆಗಿದ್ದ ಯುವ ಹಿಂದೂ ಮುಖಂಡ, ಆಪ್ತ ಮನೀಶ್ ಕುಲಾಲ್ ಅವರ ಜನ್ಮದಿನಾಚರಣೆ ವೇದಿಕೆಯಲ್ಲಿ ನಡೆಸಲಾಯಿತು.

ಹುಟ್ಟುಹಬ್ಬ ಆಚರಣೆ ಸಂದರ್ಭ ಕಾರ್ಯಕರ್ತರು ಮನೀಷ್ ಕುಲಾಲ್ ಅವರಿಗೆ ಮಲ್ಲಿಗೆ ಹಾರ ಹಾಕಿದರು. ಮನೀಶ್ ಕುಲಾಲ್ ದೀಪ ಬೆಳಗಿಸಿ, ಕೇಕ್ ಕತ್ತರಿಸಿದನು. ಅನಿಲ್ ತೆಂಕಿಲ, ಬಾಸ್ಕರ್ ಆಚಾರ್ ಹಿಂದಾರು, ಉಮೇಶ್ ವೀರಮಂಗಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಮೇಶ್ ವೀರಮಂಗಲ ಸ್ವಾಗತಿಸಿ, ಗಿರೀಶ್ ವಂದಿಸಿದರು.
ರವಿ ಕುಮಾರ್ ರೈ ಕೆದಂಬಾಡಿ ಮಠ ಕಾರ್ಯಕ್ರಮ ನಿರೂಪಿಸಿದರು. ಪುತ್ತಿಲ ಅವರ ಚುನಾವಣಾ ಏಜೆಂಟ್ ಪ್ರವೀಣ್ ಶೆಟ್ಟಿ ತಿಂಗಳಾಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.























