ಬಂಟ್ವಾಳ : ಮಹಿಳೆಯೋರ್ವರ ಜಡೆಯನ್ನು ಸವರಿ ವಿವಾದವುಂಟುಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಘಟಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಆರೋಪಿಯನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿದೆ.

ಮಂಗಳೂರಿನಿಂದ ಸಂಚಾರ ಮಾಡುತ್ತಿದ್ದ ಸರಕಾರಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯ ಹಿಂಬದಿ ಶೀಟಿನಲ್ಲಿ ಕುಳಿತುಕೊಂಡ ಅಪರಿಚಿತ ವ್ಯಕ್ತಿಯೋರ್ವ ಮಹಿಳೆಯ ಜಡೆಯನ್ನು ಸವರಿದ ವೀಡಿಯೋವನ್ನು ಸಹಪ್ರಯಾಣಿಕರು ಚಿತ್ರೀಕರಣ ಮಾಡಿದ್ದಾರೆ.
ಮಣಿಹಳ್ಳ ಸಮೀಪ ಮಹಿಳೆಯ ಜಡೆಗೆ ಕೈ ಹಾಕಿದ ವ್ಯಕ್ತಿಯ ಸಹ ಪ್ರಯಾಣಿಕ ಚಿತ್ರೀಕರಿಸಿದ ವೀಡಿಯೋ ವೈರಲ್ ಆದ ಬೆನ್ನಲ್ಲೆ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ವತಿಯಿಂದ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಯನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಘಟನೆಯ ಕುರಿತು ಶೀಘ್ರವಾಗಿ ಬಂಧಿಸಿ ಆತನ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಬಂಟ್ವಾಳ ಡಿವೈಎಸ್ಪಿ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.




























