ಪುತ್ತೂರು : ಮನೆ ಮನೆಗೆ ತೆರಳಿ ಪತಿ ಪರ ಮತಯಾಚಿಸಿ ಅವರ ಗೆಲುವಿನಲ್ಲಿಯು ಪಾತ್ರವಾಗಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಪತ್ನಿ ಸುಮಾ ಎ ರೈ ಈಗ ಪತಿ ಮುನ್ನಡೆಸುತ್ತಿದ್ದ ಉದ್ಯಮ ಕ್ಷೇತ್ರದ ಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ..!
ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದ ಉದ್ಯಮಿ ಅಶೋಕ್ ಕುಮಾರ್ ರೈ ಅವರ ಪರ ಸದ್ದಿಲ್ಲದೆ ಮನೆ ಭೇಟಿ ಮಾಡಿ ಮತಯಾಚಿಸಿದ ಸುಮಾ ಎ ರೈ ಅವರು ಈ ರಾಜಕಾರಣ ಎಲ್ಲ ಕ್ಷೇತ್ರದಂತಲ್ಲ, ಇದು ಭಿನ್ನ, ವಿಭಿನ್ನ ಅನ್ನುತ್ತಲೇ ಹೊಸ ಅನುಭವ ಸಿಕ್ಕಿತು ಎಂದರು. ರಾಜಕಾರಣದಲ್ಲಿ ಪತಿ, ನಾನೇನಿದ್ದರೂ ಉದ್ಯಮ ಕ್ಷೇತ್ರ. ಜತೆಗೆ ಮನೆ ಜವಾಬ್ದಾರಿ ನಿರ್ವಹಿಸುವೆ ಅನ್ನುತ್ತಾ ಪಾಲಿಟಿಕ್ಸ್‍ನಿಂದ ಮರಳಿ ಉದ್ಯಮ ಕ್ಷೇತ್ರದತ್ತ ಹೆಜ್ಜೆ ಇರಿಸಿ ಆ ಕಾರ್ಯದಲ್ಲಿ ಕೆಲಸ ಪ್ರಾರಂಭಿಸಿದ್ದಾರೆ.
ಅಶೋಕ್ ಕುಮಾರ್ ರೈ ಅವರು ರಿಯಲ್ ಎಸ್ಟೇಟ್ ಉದ್ಯಮಿ. ಜತೆಗೆ ಬಡವರ ಸೇವೆಗೆಂದೇ ಚಾರಿಟೇಬಲ್ ಟ್ರಸ್ಟ್ ರಚಿಸಿದ್ದಾರೆ. ಕಳೆದ 12 ವರ್ಷಗಳಿಂದ ಟ್ರಸ್ಟ್ ಮೂಲಕ 15 ಸಾವಿರ ಕುಟುಂಬಗಳಿಗೆ ನೆರವಾಗಿದ್ದಾರೆ. ಪತಿ ಅಶೋಕ್ ರೈ ಜತೆಗೆ ಸುಮಾ ಎ ರೈ ಅವರು ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ, ಅರ್ಧದಷ್ಟು ಈ ಎರಡು ಕ್ಷೇತ್ರದ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಪತಿ ಶಾಸಕರಾದ ಕಾರಣ ಇನ್ನೂ ಪೂರ್ಣ ಪ್ರಮಾಣದಲ್ಲಿ ಈ ಜವಾಬ್ದಾರಿ ಹೊರಲಿದ್ದಾರೆ.
700 ಮನೆ ಭೇಟಿ
ಅಶೋಕ್ ಕುಮಾರ್ ರೈ ಅವರಿಗೆ ಕಾಂಗ್ರೆಸ್ ಟಿಕೇಟ್ ಘೋಷಿಸಿದ ನಂತರ ಪತಿಯನ್ನು ಗೆಲ್ಲಿಸುವಲ್ಲಿ ತನ್ನ ಶ್ರಮ ಧಾರೆಯೆರೆಯಲು ನಾಮಪತ್ರ ಸಲ್ಲಿಕೆಯ ದಿನದಿಂದ ಮತ ಎಣಿಕೆಯ ತನಕವು ಸುಮಾ ರೈ ಪೂರ್ಣ ಪ್ರಮಾಣದಲ್ಲಿ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡರು. 10 ದಿನಗಳ ಕಾಲ ಪಕ್ಷದ ಮಹಿಳಾ ನಾಯಕಿಯರ ಜತೆಗೆ ಮತದಾರರ ಮನೆ ಸಂಪರ್ಕ ಮಾಡಿದರು. ಸುಡು ಬಿಸಿಲನ್ನು ಲೆಕ್ಕಿಸದೆ ದಿನವೊಂದಕ್ಕೆ 70 ಮನೆಯಂತೆ ಒಟ್ಟು 700 ಮನೆಗಳನ್ನು ಭೇಟಿ ಮಾಡಿ ಪತಿ ಪರ ಮತ ನೀಡುವಂತೆ ಮನವೊಲಿಸಿದರು. ಉಳಿದ ದಿನಗಳಲ್ಲಿ ಪಕ್ಷದ ಚುನಾವಣಾ ಕಚೇರಿಯಲ್ಲಿ ಲೆಕ್ಕಪತ್ರ ನಿರ್ವಹಣೆ ಹೊಣೆ ಹೊತ್ತರು.

ಮತ ಎಣಿಕೆ ಮುಗಿದು ಅಶೋಕ್ ರೈ ಗೆಲುವಿನ ಗೆರೆ ದಾಟಿದ್ದಾರೆ. ಹಾಗಾಗಿ ಸುಮಾ ಅವರ ಪಾಲಿಗೆ ಇನ್ನೊಂದು ದೊಡ್ಡ ಜವಾಬ್ದಾರಿ ಸಿಕ್ಕಿದೆ. ಈ ತನಕ ಉದ್ಯಮದಲ್ಲಿ ಪತಿಯೊಂದಿಗೆ ಭಾಗಿಯಾಗಿದ್ದವರು ಇನ್ನೂ ಮುಂದೆ ತಾನೇ ಆ ಕ್ಷೇತ್ರದ ಸಂಪೂರ್ಣ ಹೊಣೆ ಹೊರಲಿದ್ದಾರೆ. ಅಶೋಕ್ ರೈ ಅವರು ಶಾಸಕನಾಗಿ ಆ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಕಾರಣ ಉದ್ಯಮ ಮುನ್ನಡೆಸುವುದು ಸುಮಾ ರೈ ಅವರ ಜವಾಬ್ದಾರಿಯಾಗಿದೆ. ಮಂಗಳೂರು, ಕೋಡಿಂಬಾಡಿಯ ನಿವಾಸದಲ್ಲಿ ಪತಿ, ಮಕ್ಕಳು ಜತೆ ಸುಮಾ ರೈ ಅವರು ಸಂಸಾರ ಸಾಗಿಸುತ್ತಿದ್ದಾರೆ.
ಹಸ್ತಕ್ಷೇಪ ಇಲ್ಲ
ಚುನಾವಣೆಯ ವೇಳೆ ಪತಿಯ ಗೆಲುವಿಗೆ ಪತ್ನಿಯಾಗಿ ನೀಡಬಹುದಾದ ಸಹಕಾರವನ್ನು ನೀಡಿದ್ದೇನೆ. ಮನೆ ಮನೆಗೆ ಭೇಟಿ ನೀಡಿದಾಗ ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಪತಿಯ ದಾನಧರ್ಮದ ಬಗ್ಗೆ ಜನರಾಡಿದ ಒಳ್ಳೆಯ ಮಾತುಗಳನ್ನು ಕೇಳಿದ್ದೇನೆ. ಹೀಗಾಗಿ ಮುಂದಿನ ಐದು ವರ್ಷಗಳ ಕಾಲ ಪತಿಯ ಯಾವುದೇ ಕಾರ್ಯಕ್ಕೆ ಹಸ್ತಕ್ಷೇಪ ಮಾಡದೆ ಜನ ಸೇವೆಗೆ ಬೆಂಬಲ ನೀಡುತ್ತೇನೆ. ಪತಿ ಮುನ್ನಡೆಸುತ್ತಿದ್ದ ಉದ್ಯಮದ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸುತ್ತೇನೆ ಎನ್ನುತ್ತಾರೆ ಸುಮಾ ಎ ರೈ ಕೋಡಿಂಬಾಡಿ.



























