ಕಡಬ : ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಸಮೀಪದ ಮುಳಿಮಜಲು ಎಂಬಲ್ಲಿ ವಿದ್ಯುತ್ ಕಂಬದಲ್ಲಿ ದುರಸ್ಥಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಮೃತಪಟ್ಟ ದ್ಯಾವಣ್ಣ ದೊಡ್ಮನಿ ರವರ ತಂದೆ ಠಾಣೆಗೆ ನೀಡಿದ ದೂರಿನಂತೆ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮೃತಪಟ್ಟ ದ್ಯಾವಣ್ಣ ದೊಡ್ಮನಿ ರವರ ತಂದೆ ರೇವಣೆಪ್ಪ ದೊಡ್ಮನಿ ನೀಡಿದ ದೂರಿನ ಮೇರೆಗೆ ಕಡಬ ಶಾಖೆಯ ಸಹಾಯಕ ಇಂಜಿನಿಯರ್ ಸತ್ಯನಾರಾಯಣ ಸಿ.ಕೆ, ಕಡಬ ಶಾಖೆಯ ಕಿರಿಯ ಸಹಾಯಕ ವಸಂತ ರವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ಮೂಲದ ದ್ಯಾವಣ್ಣ ದೊಡಮನಿ (26) ಎಂಬವರು ಮೆಸ್ಕಾಂ ಮಂಗಳೂರು ವೃತ್ತ ಪುತ್ತೂರು ವಿಭಾಗ ಕಡಬ ಉಪವಿಭಾಗದ ಕಡಬ ಶಾಖೆಯಲ್ಲಿ ಹಿರಿಯ ಮಾರ್ಗದಾಳು ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮೇ.31 ರಂದು ರಾತ್ರಿ ವಿಪರೀತ ಮಳೆ ಸುರಿದ ಕಾರಣ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಸಮೀಪದ ಮುಳಿಮಜಲು ಎಂಬಲ್ಲಿ ವಿದ್ಯುತ್ ವ್ಯತ್ಯಯ ಉಂಟಾದ ಕಾರಣ ಜೂ.1 ರಂದು ದುರಸ್ಥಿಗೆ ತೆರಳಿದ್ದು, ವಿದ್ಯುತ್ ಕಂಬ ಏರಿ ವಿದ್ಯುತ್ ದುರಸ್ತಿ ಮಾಡುವಾಗ ಹಠಾತ್ ವಿದ್ಯುತ್ ಪ್ರವಹಿಸಿದ್ದು, ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಇದ್ದು ಆ ಸಮಯ ಸ್ಥಳೀಯರು ಕೋಲಿನಿಂದ ಕೆಳಗಿಸಿ ಬಳಿಕ ಚಿಕಿತ್ಸೆಗಾಗಿ ಕಡಬ ಸಮುದಾಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಿದಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ವಿದ್ಯುತ್ ದುರಸ್ಥಿ ಮಾಡುವ ಸ್ಥಳದಲ್ಲಿ ಎರಡು ಟ್ರಾನ್ಸಫಾರ್ಮ್ಗಳ ಎರಡು ಲೈನ್‌ಗಳು ಹಾದು ಹೋಗಿದ್ದು, ಒಂದು ಲೈನ್ ಆಫ್ ಮಾಡಿದ್ದು ಮತ್ತೊಂದು ಲೈನ್ ವಿದ್ಯುತ್ ಪ್ರವಹಿಸಿರುವುದರಿಂದ ಮೃತಪಟ್ಟಿರುವುದಾಗಿದೆ. ದ್ಯಾವಣ್ಣ ರವರ ಜೊತೆ ಹಿರಿಯ ಅಧಿಕಾರಿಗಳಾಗಲಿ ಅಥವಾ ಸಹಾಯಕ್ಕೆ ಯಾರನ್ನೂ ಜೊತೆಗೆ ಕಳುಹಿಸದೇ ಹಾಗೂ ಹೆಲ್ಮೇಟ್ ಹ್ಯಾಂಡ್‌ಗ್ಲೋಸ್ ಶೂ, ಯಾವುದೇ ಸೇಫ್ಟಿ ಸಾಮಗ್ರಿಗಳನ್ನು ನೀಡದೇ ವಿದ್ಯುತ್ ದುರಸ್ಥಿ ಕೆಲಸಕ್ಕೆ ನಿರ್ಲಕ್ಷತನದಿಂದ ವಿದ್ಯುತ್ ಕಂಬ ಹತ್ತಲು ಹೇಳಿ..,ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಡಬ ಠಾಣೆಯಲ್ಲಿ ಅ.ಕ್ರ: 51/2023.ಕಲಂ: 304(A) ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿದೆ..
























