ಪುತ್ತೂರು : ಪ್ರಯಾಣಿಕರ ಸುರಕ್ಷತೆಗೆ ಸಿಬ್ಬಂದಿಗಳು ಪ್ರತಿ ಕ್ಷಣವೂ ಎಚ್ಚರದಿಂದ ಇರುವಂತೆ ಹುಬ್ಬಳ್ಳಿ ನೈಋತ್ಯ ರೈಲ್ವೇಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ರೈಲ್ವೇ ಸಿಬ್ಬಂದಿಗೆ ಸೂಚಿಸಿದ್ದಾರೆ.
ಸಕಲೇಶಪುರದಿಂದ ಪುತ್ತೂರಿನ ತನಕ ಹಳಿವೀಕ್ಷಣೆ ಮತ್ತು ಪ್ರಯಾಣ ಸುರಕ್ಷತೆ ಬಗ್ಗೆ ಪರಿಶೀಲಿಸಿದರಲ್ಲದೇ ಪುತ್ತೂರು-ಕಬಕ ರೈಲ್ವೇ ನಿಲ್ದಾಣಕ್ಕೂ ಭೇಟಿ ನೀಡಿದರು.

ಈ ವೇಳೆ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ ಅವರು ರೈಲ್ವೇ ಹಳಿ ಅಥವಾ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಲ್ಲಿ
ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ತತ್‌ಕ್ಷಣ ಅದಕ್ಕೆ ಸ್ಪಂದಿಸಬೇಕು. ಮೇಲಾಧಿಕಾರಿಗಳ ಜತೆಗೆ ಸಂಪರ್ಕ ಇರಿಸಿ ನಿತ್ಯವೂ ನಿಲ್ದಾಣದ ಆಗುಹೋಗುಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.
ನಿಲುಗಡೆ ನೀಡಿ
ಮಂಗಳೂರಿನಿಂದ ಮೈಸೂರು ಮೂಲಕ ಬೆಂಗಳೂರಿಗೆ ತೆರಳುವ ರೈಲನ್ನು ಕಾಣಿಯೂರು, ಎಡಮಂಗಲ, ಕೋಡಿಂಬಾಳ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು. ಪ್ರಸ್ತುತ ಪುತ್ತೂರು, ಸುಬ್ರಹ್ಮಣ್ಯದಲ್ಲಿ ಮಾತ್ರ ನಿಲುಗಡೆ ಆಗುತಿದ್ದು ಸ್ಥಳೀಯ ನಿಲ್ದಾಣಗಳಲ್ಲಿ
ನಿಲುಗಡೆಗೆ ಅವಕಾಶ ಕೊಟ್ಟರೆ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲಕರ ಎಂದು ತಿಳಿಸಿದ ಜಿ.ಕೆ.ಭಟ್ ರೈಲ್ವೇ ಅಭಿವೃದ್ಧಿಗೆ
ಸಂಬಂಧಿಸಿ ಹಲವು ಬೇಡಿಕೆಗಳನ್ನು ಸಲ್ಲಿಸಿದರು.
ರೈಲ್ವೇ ಹೋರಾಟಗಾರ ಜಿ.ಕೆ.ಭಟ್ ಮಾತನಾಡಿ, ಬೆಳಗ್ಗೆ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಮತ್ತು ಸಂಜೆ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಆರಂಭಿಸಬೇಕು. ರಾತ್ರಿ ಮಂಗಳೂರಿನಿಂದ ಪುತ್ತೂರಿಗೆ ಬಂದು ಪುನಃ ಮಂಗಳೂರಿಗೆ
ತೆರಳುವ ರೈಲನ್ನು ನೇರವಾಗಿ ಸುಬ್ರಹ್ಮಣ್ಯಕ್ಕೆ ಸಂಚರಿಸುವಂತೆ ಮಾಡಿ ಅಲ್ಲಿ ರಾತ್ರಿ ನಿಲುಗಡೆ ಮಾಡಿ ಮರುದಿನ ಬೆಳಗ್ಗೆ ಮಂಗಳೂರು ಕಡೆ ಸಂಚರಿಸಿದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದರು. ಈ ಬಗ್ಗೆ ಅಧಿಕಾರಿಗಳಿಗೆ ಪರಿಶೀಲಿಸಲು ಜಿಎಂ ಸೂಚಿಸಿದರು.
ಸಾಮಾಜಿಕ ಕಾರ್ಯಕರ್ತ ಲಕ್ಷ್ಮಿ ನಾರಾಯಣ ಮಾತನಾಡಿ, ಬಿ.ಸಿ.ರೋಡು ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಸುರಕ್ಷತೆ ಇಲ್ಲ. ನಂದಾವರ ಬಳಿಯ ರೈಲ್ವೇ ಸೇತುವೆ ಅಪರಿಚಿತ ವ್ಯಕ್ತಿಗಳ ಅಡ್ಡೆಯಾಗಿದೆ. ಕೆಲವು ದಿನಗಳ ಹಿಂದೆ ಪ್ರಧಾನಿಯವರ ಹತ್ಯೆಗೆ ಯತ್ನಿಸಿದ ಆರೋಪದಡಿ ಬಂಧಿತರಾದ ಕೆಲವರು ಇದೇ ಪರಿಸರದ ರೈಲು ಹಳಿಗಳಲ್ಲಿ ಇರುತಿದ್ದರು ಎನ್ನಲಾಗಿದೆ. ಹಾಗಾಗಿ ಇಲ್ಲಿ ದೇಶದ ಭದ್ರತೆಗೆ ಧಕ್ಕೆಯಾಗುವಂತಹ ಘಟನೆಗಳು ನಡೆಯುವ ಆತಂಕ ಇದೆ ಎಂದು ಗಮನ ಸೆಳೆದರು.
ಹಳಿಗಳ ಬಳಿ ಗಾಂಜಾ ಸೇರಿದಂತೆ ಮಾದಕ ಪದಾರ್ಥಗಳ ಬಳಕೆ ಹೆಚ್ಚುತ್ತಿದ್ದು, ಶೌಚಾಲಯಗಳು ಅವ್ಯವಹಾರದ ತಾಣವಾಗುತ್ತಿದ್ದು, ಪ್ರಯಾಣಿಕರಿಗೆ ಸುರಕ್ಷತೆ ಇಲ್ಲದಂತಾಗಿದೆ. ರೈಲ್ವೇಗೆ ಸೇರಿದ ಜಾಗಗಳ ಅತಿಕ್ರಮಿಸಲಾಗಿದೆ ಎಂದು ದೂರಿದರು. ಈ ಬಗ್ಗೆ ಜಿ.ಎಂ.ಅವರು ಸ್ಥಳೀಯ ನಿಲ್ದಾಣದ ಅಧಿಕಾರಿಯನ್ನು ಪ್ರಶ್ನಿಸಿದರು. ಸುರಕ್ಷತೆಗೆ ಕೈಗೊಂಡ ಕ್ರಮಗಳ ಬಗ್ಗೆ ಇಲ್ಲಿ ಪ್ರಸ್ತಾವಿಸಿದವರಿಗೆ ಮಾಹಿತಿ ನೀಡಬೇಕು ಎಂದರು.
ಕಾಮಗಾರಿ ವೀಕ್ಷಣೆ
ಪುತ್ತೂರು ಎಪಿಎಂಸಿ ರಸ್ತೆಯಲ್ಲಿ 13 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಅಂಡರ್‌ಪಾಸ್ ಕಾಮಗಾರಿಯನ್ನು ವೀಕ್ಷಿಸಿದ ಜಿ.ಎಂ. ಸಲಹೆ ಸೂಚನೆ ನೀಡಿದರು..
ಸ್ವಚ್ಛ ನಿಲ್ದಾಣ : ಪ್ರಶಂಸೆ
ಇದೇ ಸಂದರ್ಭದಲ್ಲಿ ಪುತ್ತೂರು-ಕಬಕ ರೈಲ್ವೇ ನಿಲ್ದಾಣವನ್ನು ವೀಕ್ಷಿಸಿದ ಅವರು ಇಲ್ಲಿನ ಸ್ವಚ್ಛ ಪರಿಸರಕ್ಕೆ ಸಿಬಂದಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಇದೇ ರೀತಿ ಸ್ವಚ್ಛತೆ ಕಾಪಾಡಿಕೊಂಡು ಮಾದರಿಯಾಗಿರುವಂತೆ ಸಿಬಂದಿಗೆ ಸೂಚಿಸಿದರು.
ಮೈಸೂರು ಡಿಆರ್‌ಎಂ ಶಿಲ್ಪಿ ಅಗರ್ ವಾಲ್,, ಸಿಟಿಐ ಮಜ್ದೂರು ಯೂನಿಯನ್ ಸೆಕ್ರೆಟರಿ ವಿಠಲ್ ನಾೖಕ್, ಸ್ಟೇಷನ್ ಮಾಸ್ಟರ್ ಎಂ.ಆರ್.ರಾಹುಲ್, ಹೋರಾಟಗಾರ ದಿನೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.


























