ಪುತ್ತೂರು : ಕೊಕ್ಕಡದ ವಿದ್ಯಾರ್ಥಿನಿಯೋರ್ವಳು ಪುತ್ತೂರಿನ ಪಡೀಲ್‌ನಲ್ಲಿರುವ ಹಾಸ್ಟೆಲೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕೊಕ್ಕಡ ಗ್ರಾಮದ ನೇತ್ರಾಳ ನಿವಾಸಿ ಶ್ರೀಧರ ಆಚಾರ್ಯ ಹಾಗೂ ದಿ. ಪುಷ್ಪ ದಂಪತಿ ಪುತ್ರಿ ರೇಖಾ (15) ಆತ್ಮಹತ್ಯೆ ಮಾಡಿಕೊಂಡವರು.
ರೇಖಾ ರವರ ತಾಯಿ ಪುಷ್ಪ ಅವರು ಕಳೆದ ವರ್ಷ ನಿಧನರಾಗಿದ್ದರು. ತಂದೆ ಕೂಲಿ ಕೆಲಸ ಮಾಡುತ್ತಿದ್ದು, ತಾಯಿಯ ನಿಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದಳು. ಅಲ್ಲದೆ ಆಕೆ ತಮ್ಮ ಸಂಬಂಧಿಕರ ಮನೆಯಿಂದ ಶಾಲೆಗೆ ಹೋಗುತ್ತಿದ್ದಳು. ಕೊಕ್ಕಡ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆಯನ್ನು ಅತ್ತೆ ಒತ್ತಾಯದ ಮೇರೆಗೆ ಪುತ್ತೂರಿನ ಪಡೀಲ್ ಹಾಸ್ಟೆಲ್‌ಗೆ ಸೇರಿಸಿ ಓದುವಂತೆ ಹೇಳುತ್ತಿದ್ದರೆನ್ನಲಾಗಿದೆ.
ಆರಂಭದಲ್ಲಿ ಹಾಸ್ಟೆಲಿಗೆ ಹೋಗಲು ನಿರಾಕರಿಸಿದ ಆಕೆ ಬಳಿಕ ಹಾಸ್ಟೆಲ್ ಸೇರಲು ಒಪ್ಪಿದ್ದಳು. ಹಾಸ್ಟೆಲ್ ಬೇಡ, ಇಂಗ್ಲೀಷ್ ಕಷ್ಟದ ವಿಷಯ ಎಂದು ಆಗಾಗ ಹೇಳುತ್ತಿದ್ದಳು ಎನ್ನಲಾಗಿದೆ.
ಕೊಕ್ಕಡ ಶಾಲೆಯಲ್ಲಿರುವಾಗ ಗೆಳತಿಯರೊಂದಿಗೆ ಉತ್ತಮವಾಗಿ ಬೆರೆತು ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದಳು ಎನ್ನಲಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ..
























