ಮಂಗಳೂರು : ಮೆಡಿಕಲ್ ರೆಪ್ ಆಗಿ ಕೆಲಸ ಮಾಡಿಕೊಂಡಿದ್ದ ಯುವಕನೋರ್ವ ನಾಪತ್ತೆಯಾಗಿದ್ದು, ಈ ಬಗ್ಗೆ ದೂರು ನೀಡಿ 7 ದಿನಗಳು ಕಳೆದರೂ ಆತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಮೂಲತಃ ಗುಂಡ್ಯ, ಸಿರಿಬಾಗಿಲು, ಬಾರ್ಯ ನಿವಾಸಿ, ಪ್ರಸ್ತುತ ಬಿಕರ್ನಕಟ್ಟೆ ಸಮೀಪದ ಬಜ್ಜೋಡಿ ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ತೇಜಕುಮಾರ್ (26) ನಾಪತ್ತೆಯಾದ ಯುವಕ.
ತೇಜಕುಮಾರ್ ಮಂಗಳೂರಿನಲ್ಲಿ ಮೆಡಿಕಲ್ ರೆಪ್ ಆಗಿ ಕೆಲಸ ಮಾಡಿಕೊಂಡಿದ್ದು, ಬಿಕರ್ನಕಟ್ಟೆ ಸಮೀಪದ ಬಜ್ಜೋಡಿ ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು.
ತೇಜಕುಮಾರ್ ಜೂ.6 ರಂದು ತನ್ನ ತಾಯಿಗೆ ಕರೆ ಮಾಡಿ ಕಂಪನಿಯ ಮೀಟಿಂಗ್ ಇರುವುದರಿಂದ ಜೂ.7 ರಂದು ರಾತ್ರಿ ಬೆಂಗಳೂರಿಗೆ ಹೋಗುವುದಾಗಿ ಹೇಳಿದ್ದರು.
ಜೂ.7 ರಂದು ಕಂಪನಿಯ ಮ್ಯಾನೇಜರ್ ತಾಯಿಯ ಫೋನ್ ಗೆ ಕರೆ ಮಾಡಿ ತೇಜ್ ಕುಮಾರ್ ನ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿದ್ದು, ನಮಗೆ ಮೀಟಿಂಗ್ ನಿಮಿತ್ತ ಬೆಂಗಳೂರಿಗೆ ಹೋಗಲು ಇತ್ತು ಮನೆಗೆ ಬಂದಿದ್ದಾನ ಎಂದು ವಿಚಾರಿಸಿದ್ದರು. ಈ ಬಗ್ಗೆ ತೇಜ ಕುಮಾರ್ ಸಹೋದರ ನೀಡಿದ ದೂರಿನ ಮೇರೆಗೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹೋದರ ಹಾಗೂ ಸ್ನೇಹಿತರು ಹುಡುಕಾಟ ನಡೆಸುವಾಗ ತೇಜಕುಮಾರ್ ಬೈಕ್ ಬಿಕರ್ನಕಟ್ಟೆ ಸಮೀಪ ಪತ್ತೆಯಾಗಿದ್ದು, ನಾಪತ್ತೆಯಾಗಿ 7 ದಿನ ಕಳೆದರೂ ತೇಜ ಕುಮಾರ್ ಎಲ್ಲಿಯೂ ಪತ್ತೆಯಾಗಿಲ್ಲ ಹಾಗೂ ಆತನ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.
ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರಿಗೂ ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.


























