ಬೆಳ್ತಂಗಡಿ : ಯುವಕರ ಗುಂಪೊಂದು ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಾ ಹುಚ್ಚಾಟ ಮೆರೆಯುತ್ತಿದ್ದ ಘಟನೆ ಚಾರ್ಮಾಡಿ ರಸ್ತೆಯ ವ್ಯೂ ಪಾಯಿಂಟ್ ನಲ್ಲಿ ನಡೆದಿದೆ.

ಚಾರ್ಮಾಡಿ ತಿರುವು ರಸ್ತೆಯಲ್ಲಿ ಯುವಕರ ತಂಡ ರಸ್ತೆ ಮಧ್ಯೆಯೇ ಕ್ರಿಕೆಟ್ ಆಟವಾಡುತ್ತಾ, ತಮ್ಮ ಜೀವದ ಜೊತೆ ಮಾತ್ರವಲ್ಲದೇ ವಾಹನ ಸವಾರರ ಪ್ರಾಣದ ಜೊತೆಯೂ ಚೆಲ್ಲಾಟವಾಡುತ್ತಿದ್ದರು.
ಅಲ್ಲಿಯೇ ಸಮೀಪ ಆಪೆಯಲ್ಲಿ ಜೋಳ ಮಾರಾಟ ಮಾಡುತ್ತಿದ್ದ ಸ್ಥಳೀಯ ವ್ಯಕ್ತಿ ಇಲ್ಲಿ ಆಡ್ಬೇಡಿ ಪೊಲೀಸರು ಫೈನ್ ಹಾಕ್ತಾರೆ ಎಂದು ಹೇಳಿದ್ರೂ ಲೆಕ್ಕಿಸದ ಯುವಕರ ತಂಡ ಆಟ ಮುಂದುವರಿಸಿದ್ದರು ಎನ್ನಲಾಗಿದೆ.
ಕೆಲ ಸಮಯದ ಬಳಿಕ ಮಳೆ ಬರುತ್ತಿದ್ದಂತೆ ಯುವಕರು ಕಾರು ಹತ್ತಿ ತೆರಳಿದ್ದಾರೆ ಎಂದು ವರದಿಯಾಗಿದೆ.
ಪ್ರವಾಸಕ್ಕೆಂದು ಬಂದು ಈ ರೀತಿಯಾಗಿ ಹುಚ್ಚಾಟ ನಡೆಸಿ ಅವರ ಪ್ರಾಣ ಮಾತ್ರವಲ್ಲದೇ ಇತರರ ಪ್ರಾಣಕ್ಕೂ ಕುತ್ತು ತರುವುದು ಉತ್ತಮ ನಡವಳಿಕೆ ಅಲ್ಲ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.