ಬೆಳ್ತಂಗಡಿ : ಬಂದಾರು ಗ್ರಾಮದ ನೆರೋಲ್ದಪಲ್ಕೆ ಎಂಬಲ್ಲಿ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಆಟೋರಿಕ್ಷಾದಲ್ಲಿ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಆಟೋ ರಿಕ್ಷಾ ಚಾಲಕ ಹಾಗೂ ಮತ್ತೊಬ್ಬನ ಮೇಲೆ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆಟೋ ರಿಕ್ಷಾ ಚಾಲಕ ಸಾದಿಕ್ ಮತ್ತು ಸ್ಥಳೀಯ ನಿವಾಸಿ ಕರೀಂ ರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜೂನ್ 18 ರಂದು 17 ವರ್ಷದ ಬಾಲಕಿ ತನ್ನ ತಾಯಿ ಪಡೆದ ಸಾಲದ ಕಂತು ಪಾವತಿಸಲು ಸ್ವಸಹಾಯ ಸಂಘದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಳು. ಬಾಲಕಿಯ ಕುಟುಂಬಕ್ಕೆ ಪರಿಚಯವಿರುವ ಕರೀಂ ಮತ್ತು ಆಟೋ ಚಾಲಕ ಸಾದಿಕ್ ಎಂಬಾತ ಬಾಲಕಿಯ ಕುಟುಂಬದೊಂದಿಗೆ ಇರುವ ಪರಿಚಯವನ್ನು ದುರುಪಯೋಗಪಡಿಸಿಕೊಂಡು ಆಕೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ.
ಕರೀಂ ಬಾಲಕಿಗೆ 200 ರೂ ನೀಡಿ ತನ್ನೊಂದಿಗೆ ಆಟೋ ರಿಕ್ಷಾದಲ್ಲಿ ಬೆಳ್ತಂಗಡಿಗೆ ಬರುವಂತೆ ಆಮಿಷ ಒಡ್ಡಿ ಕಿರುಕುಳ ನೀಡಿದ್ದಾನೆ. ಬಾಲಕಿ ಇದನ್ನು ವಿರೋಧಿಸಿ ಆಟೋರಿಕ್ಷಾದಿಂದ ಜಿಗಿದಿದ್ದಾಳೆ. ಆಕೆಯ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಬಾಲಕಿ ವಾಹನದಿಂದ ಜಿಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಬಾಲಕಿ ಧರ್ಮಸ್ಥಳ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.


























