ಪುತ್ತೂರು : ಎ.ಯು ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮತ್ತು ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಅಚಲ್ ಉಬರಡ್ಕ ರವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕನ್ನಡ ಕಿರುಚಿತ್ರ ಪಥಕ್ಕೆ ರಾಜ್ಯ ಮಟ್ಟದ ‘ಬೆಸ್ಟ್ ಸಿನಿಮಾಟೋಗ್ರಫಿ ಪ್ರಶಸ್ತಿ’ ಲಭಿಸಿದೆ.
ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಆಯೋಜಿಸಿದ ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ಉತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಯೋಶಿತ್ ಬನ್ನೂರು ಈ ಚಿತ್ರದ ಛಾಯಾಗ್ರಹಣವನ್ನು ಮಾಡಿದ್ದಾರೆ. ನಮನ್ ಶೆಟ್ಟಿ ಸಂಕಲನ ಮಾಡಿದ್ದು, ಅಶ್ವಿನ್ ಬಾಬಣ್ಣ ಸಂಗೀತ ನಿರ್ದೇಶನ ಮಾಡಿರುತ್ತಾರೆ. ಪಥ ಕಿರುಚಿತ್ರದ ನಾಯಕರಾಗಿ ಅಚಲ್ ಉಬರಡ್ಕ ಹಾಗೂ ನಾಯಕಿಯಾಗಿ ವಿಶ್ರಿತ ಆಚಾರ್ಯ ರವರು ಬಣ್ಣ ಹಚ್ಚಿದ್ದು, ಶರತ್ ಕೆ ಎನ್, ಸ್ವಸ್ತಿಕ್ ಶೆಟ್ಟಿ, ಅರಹಂತ್ ಜೈನ್, ಗಗನ್ ದೀಪ್, ಮಂಜುನಾಥ್ ಜೋಡುಕಲ್ಲು ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರವು ಸಾಮಾಜಿಕ ಕಳಕಳಿಯನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುವುದರ ಪರಿಣಾಮ ಹಾಗೂ ಹೆಲ್ಮೆಟ್ ಧರಿಸದೇ ಇರುವುದರಿಂದ ಆಗುವ ಸಮಸ್ಯೆಗಳ ಬಗೆಗೆ ಜಾಗೃತಿಯನ್ನು ಮೂಡಿಸುವ ಪ್ರಯತ್ನವೆ ಚಿತ್ರದ ಕಥಾವಸ್ತುವಾಗಿದೆ. ಈ ಕಿರುಚಿತ್ರವನ್ನು ಸಂಪೂರ್ಣವಾಗಿ ಮೊಬೈಲ್ ನಲ್ಲಿಯೇ ಚಿತ್ರೀಕರಿಸಿ ಮತ್ತು ಸಂಕಲನವನ್ನು ಮಾಡಿರುವುದು ವಿಶೇಷ.
ಪಥ ಕಿರುಚಿತ್ರವು ಜೂ.24 ರಂದು ವಿವೇಕಾನಂದ ಕಾಲೇಜಿನಲ್ಲಿ ದೀಪಕ್ ರೈ ಪಾಣಾಜೆ ರವರ ಸಮ್ಮುಖದಲಿ ಬಿಡುಗಡೆಗೊಳ್ಳಲಿದೆ.


























