ಕೈರೋ: ಅಮೆರಿಕದಿಂದ ನೇರವಾಗಿ ಈಜಿಪ್ಟ್ಗೆ ಪ್ರವಾಸಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಾವಿರ ವರ್ಷ ಹಳೆಯದಾದ ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಿದರು.

ಭಾರತದ ದಾವೂದಿ ಬೊಹ್ರಾ ಸಮುದಾಯದ ಸಹಾಯದಿಂದ ಪುನಃ ಸ್ಥಾಪಿಸಲಾದ ಕೈರೋದಲ್ಲಿನ 11ನೇ ಶತಮಾನದ ಐತಿಹಾಸಿಕ ಅಲ್-ಹಕೀಮ್ ಮಸೀದಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. 1012 ರಲ್ಲಿ ನಿರ್ಮಿಸಲಾದ ಮಸೀದಿಯ ಗೋಡೆಗಳು ಮತ್ತು ದ್ವಾರಗಳ ಮೇಲಿನ ಕೆತ್ತನೆ ನೋಡಿ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದರು.
ಮಸೀದಿ ವಿಶೇಷತೆ ಏನು.!??
ಸಾವಿರ ವರ್ಷಗಳಷ್ಟು ಹಳೆಯದಾದ ಅಲ್-ಹಕೀಮ್ ಕೈರೋದಲ್ಲಿನ 4ನೇ ಅತ್ಯಂತ ಹಳೆಯ ಮಸೀದಿಯಾಗಿದೆ. ನಗರದಲ್ಲಿ ನಿರ್ಮಿಸಲಾದ ಎರಡನೇ ಫಾತಿಮಿಡ್ ಮಸೀದಿಯಾಗಿದೆ. ಮಸೀದಿಯು 13,560 ಚದರ ಮೀಟರ್ಗಳಷ್ಟು ವಿಸ್ತೀರ್ಣ ಹೊಂದಿದೆ. ಸಾಂಪ್ರದಾಯಿಕ ಕೇಂದ್ರ ಪ್ರಾಂಗಣವು 5,000 ಚದರ ಮೀಟರ್ ವೀಸ್ತೀರ್ಣವಿದೆ.

ದಾವೂದಿ ಬೋಹ್ರಾ ಮುಸ್ಲಿಮರು ಇಸ್ಲಾಂ ಅನುಯಾಯಿಗಳಲ್ಲಿ ಒಂದು ಪಂಗಡ. ಅವರು 11 ನೇ ಶತಮಾನದಲ್ಲಿ ಭಾರತದಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳುವ ಮೊದಲು ಈಜಿಪ್ಟ್ನಿಂದ ಯೆಮೆನ್ಗೆ ಸ್ಥಳಾಂತರಗೊಂಡಿದ್ದರು.

ಮಸೀದಿ ಭೇಟಿ ಬಳಿಕ ಮೋದಿ ಅವರು, ಹೆಲಿಯೊಪೊಲಿಸ್ ಕಾಮನ್ವೆಲ್ತ್ ಯುದ್ಧಸ್ಮಾರಕಕ್ಕೆ ಭೇಟಿ ನೀಡಿದರು. ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಈಜಿಪ್ಟ್ ಮತ್ತು ಪ್ಯಾಲೆಸ್ತೀನ್ನಲ್ಲಿ ವೀರಾವೇಶದಿಂದ ಹೋರಾಡಿ ಬಲಿದಾನಗೈದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು. ಇಲ್ಲಿ ಮೊದಲ ವಿಶ್ವಯುದ್ಧದಲ್ಲಿ ಸುಮಾರು 4,000 ಭಾರತೀಯ ಯೋಧರು ಹುತಾತ್ಮರಾಗಿದ್ದರು.




























