ರಾಯಚೂರು/ಬೆಂಗಳೂರು : ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ರೈ ಅವರನ್ನ ಬೆಂಗಳೂರು ಕೆ.ಆರ್ ಪುರಂನಿಂದ ರಾಯಚೂರು ಸಿರಿವಾರ ತಾಲೂಕಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಗ್ರೇಡ್-1 ತಹಶೀಲ್ದಾರ್ ಆಗಿದ್ದ ಅಜಿತ್ ರೈ ಅವರಿಗೆ ಗ್ರೇಡ್-2 ಹಿಂಬಡ್ತಿ ನೀಡಿ ಸಿರಿವಾರಕ್ಕೆ ವರ್ಗಾವಣೆ ಮಾಡಿ ರಾಜ್ಯಪಾಲರ ಸೂಚನೆ ಮೇರೆಗೆ ಕಂದಾಯ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಜೂನ್ 28ರಿಂದ ಅಮಾನತ್ತಿನಲ್ಲಿರುವ ಅಜಿತ್ ರೈ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದ ಅಡಿ ಲೋಕಾಯುಕ್ತ ಪೊಲೀಸರ ದಾಳಿಗೆ ಒಳಗಾಗಿದ್ದಾರೆ. ಆದ್ರೆ ವಿಚಾರಣೆಯಲ್ಲಿರುವ ಅಧಿಕಾರಿಯನ್ನ ವರ್ಗಾವಣೆ ಮಾಡಿದ್ದಕ್ಕೆ ಸರ್ಕಾರದ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ. ಹಿಂದುಳಿದ ನೂತನ ತಾಲೂಕು ಸಿರವಾರ ಅಭಿವೃದ್ಧಿಗೆ ದಕ್ಷ ಅಧಿಕಾರಿಯನ್ನ ನೇಮಿಸುವಂತೆ ಜನ ಆಗ್ರಹಿಸಿದ್ದಾರೆ.
ಅನುಕಂಪದ ಆಧಾರದಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಪಡೆದುಕೊಂಡಿದ್ದ ಅಜಿತ್ ರೈ ನಂತರ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಬಡ್ತಿ ಪಡೆದಿದ್ದರು. ಪ್ರಸ್ತುತ ಕೆ.ಆರ್.ಪುರಂನಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದಾಯಕ್ಕಿಂತ 69% ಹೆಚ್ಚುವರಿ ಆಸ್ತಿ ಹೊಂದಿರುವ ಆರೋಪದಲ್ಲಿ ಅಜಿತ್ ರೈ ಅನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

























