ಮಂಗಳೂರು : ತುಳುನಾಡಿನ ಜನರಿಗೆ ದೈವಗಳು ಬಹಳ ಮುಖ್ಯ ಅವರಿಗೆ ದೈವಗಳ ಮೇಲಿನ ನಂಬಿಕೆ ಅಪರಿಮಿತ. ಮುಖ್ಯವಾಗಿ ತುಳುನಾಡನ್ನ ದೈವಗಳ ನೆಲೆಬೀಡು ಎನ್ನಲಾಗುತ್ತದೆ. ಅದರಲ್ಲೂ ಕೊರಗಜ್ಜ ಎಂದರೆ ತುಸು ಹೆಚ್ಚೇ ನಂಬಿಕೆ ಹಾಗೂ ಭಕ್ತಿ ಕೂಡ.
ಈಗ ಈ ಕೊರಗಜ್ಜ ಅಥವಾ ದೈವಗಳು ಕೇವಲ ತುಳುನಾಡಿಗೆ ಸೀಮಿತವಲ್ಲ. ಮಹಿಮೆ ರಾಜ್ಯದಾದ್ಯಂತ ಮಾತ್ರವಲ್ಲ ದೇಶದಾದ್ಯಂತ ಸಹ ಪಸರಿಸಿದೆ. ಹಾಗೆಯೇ, ಕೊರಗಜ್ಜನ ದರ್ಶನ ಮಾಡಲು ಬರುವ ಭಕ್ತರ ಸಂಖ್ಯೆ ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಕೊರಗಜ್ಜನ ಆದಿಸ್ಥಳವನ್ನ ಬಹಳ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಈಗಂತೂ ಭಕ್ತರು ತಮ್ಮ ಕಷ್ಟಗಳನ್ನ ಪರಿಹರಿಸುವಂತೆ ಕೋರಿಕೊಂಡು ಕೊರಗಜ್ಜನ ಬಳಿ ಪದೇ ಪದೇ ಹೋಗುತ್ತಿರುತ್ತಾರೆ.
ತುಳುನಾಡಿನಲ್ಲಿ ಕೊರಗಜ್ಜನ ಆದಿಸ್ಥಳಗಳು ಬಹಳಷ್ಟಿವೆ. ವಿವಿಧ ಸ್ಥಳಗಳಲ್ಲಿ ಕೊರಗಜ್ಜನ ದೈವಸ್ಥಾನಗಳಿದ್ದು, ಭಕ್ತರು ಅವರ ಇಚ್ಛೆಗೆ ಅನುಗುಣವಾಗಿ ಆಯಾ ಸ್ಥಳಗಳಿಗೆ ಭೇಟಿ ನೀಡುತ್ತಾರೆ.
ಇನ್ನು ಮುಖ್ಯವಾಗಿ ಹೆಚ್ಚು ಜನ ಭೇಟಿ ನೀಡುವ ಸ್ಥಳ ಎಂದರೆ ಕುತ್ತಾರಿನ ಕೊರಗಜ್ಜ ಆದಿಸ್ಥಳಕ್ಕೆ. ಆದರೆ ಈ ಕುತ್ತಾರಿನ ಬಳಿ ಇನ್ನೊಂದು ಸ್ಥಳವಿದ್ದು, ಅಲ್ಲಿ ರಕ್ತೇಶ್ವರಿ ದೇವಿ ಹಾಗೂ ಕೊರಗಜ್ಜ ಇಬ್ಬರ ದೈವಸ್ಥಾನ ಕೂಡ ಇದೆ. ಈ ದೈವಸ್ಥಾನಕ್ಕೆ ಹೋಗುವ ಭಕ್ತಾಧಿಗಳಿಗೆ ಬೇಸರದ ಸಂಗತಿಯೊಂದಿದೆ.
ಹೌದು, ಆದಿಸ್ಥಳ ಶ್ರೀ ರಕ್ತೇಶ್ವರಿ ಬೆರ್ಮೆರ್ ಯೆಳ್ವೆರ್ ಸಿರಿಗಳು ಕೊರಗಜ್ಜ ಕ್ಷೇತ್ರ ಕುತ್ತಾರ್ ಪದವು ಈ ಕ್ಷೇತ್ರಕ್ಕೆ ಬರುವ ರಸ್ತೆಯ ಕಾಮಗಾರಿ ನಡೆಯುತ್ತಿರುವ ಕಾರಣ ಭಕ್ತಾಧಿಗಳಿಗೆ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಇಷ್ಟೇ ಅಲ್ಲದೇ, ಭಾನುವಾರ ಹಾಗೂ ಶುಕ್ರವಾರ ನಡೆಯುತ್ತಿರುವ ವಿಶೇಷ ಪೂಜೆಗಳನ್ನ ಸಹ ಸ್ಥಗಿತ ಮಾಡಲಾಗಿದ್ದು, ಸುಮಾರು ಒಂದು ತಿಂಗಳ ಕಾಲ ಭಕ್ತಾಧಿಗಳಿಗೆ ಅವಕಾಶವಿಲ್ಲ ಎಂದು ಆಡಳಿತ ಮಂಡಳಿ ಹೇಳಿದ್ದು, ಹೆಚ್ಚಿನ ಮಾಹಿತಿಯನ್ನ ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ಸೂಚನೆ ನೀಡಿದೆ.


























