ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಅಕ್ಸಲರೇಟ್ ಇಂಡಿಯಾ ಫೌಂಡೆಶನ್ ಟ್ರಸ್ಟ್, ಸುಪ್ರಜಿತ್ ಫೌಂಡೇಶನ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕೋವಿಡ್ ನಿಂದ ಏಕಪೋಷಕ ಮತ್ತು ದ್ವಿಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಶಾಲಾ ಶುಲ್ಕವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ 1ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ಸುಮಾರು 40ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷರಾದ ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್, ಕಾರ್ಯದರ್ಶಿ ವಿಠ್ಠಲ್ ದಾಸ್ ಕಾಮತ್ ರವರು ಮಾತನಾಡಿ, ನಮ್ಮ ಸಂಸ್ಥೆಯು ಕಳೆದ ಐದು ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕೋವಿಡ್ ಮಹಾಮಾರಿ ನಂತರ ನಾವು ಮುಖ್ಯವಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೆ ಗಮನಹರಿಸಿದ್ದೇವೆ, ಅದರ ಸಲುವಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ಸಹಾಯಧನವನ್ನು ನೀಡುತ್ತಿದ್ದೇವೆ. ನೀವು ಎಲ್ಲಿಯ ವರೆಗೂ ವಿದ್ಯಾಭ್ಯಾಸವನ್ನು ಮಾಡುತ್ತಿರೋ ಅಲ್ಲಿಯವರೆಗೂ ನಮ್ಮ ಸಂಸ್ಥೆಯು ನಿಮಗೆ ಸಹಾಯ ಮಾಡುತ್ತದೆ, ಆದ್ದರಿಂದ ಎಲ್ಲಾ ಮಕ್ಕಳು ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆದು ಸಮಾಜದಲ್ಲಿ ಉನ್ನತ ಹುದ್ದೆಯನ್ನು ಪಡೆದುಕೊಳ್ಳಬೇಕೆಂಬುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ನಾವು ನೀಡುತ್ತಿರುವ ಶಾಲಾ ಶುಲ್ಕವು ಹಲವಾರು ದಾನಿಗಳ ಹಣವಾಗಿದ್ದು ಎಲ್ಲರೂ ಸಹಾಯಧನವನ್ನು ವಿದ್ಯಾಭ್ಯಾಸಕ್ಕಾಗಿ ಮಾತ್ರ ಉಪಯೋಗಿಸಬೇಕು ಎಂದರು.
ಸುಪ್ರಜಿತ್ ಫೌಂಡೇಶನ್ ಸಂಯೋಜಕರಾದ ರವಿಕುಮಾರ್ ರವರು ಮಾತನಾಡಿ, ಸುಪ್ರಜಿತ್ ಫೌಂಡೇಶನ್ ಸಂಸ್ಥಾಪಕರಾದ ಕೆ ಅಜಿತ್ ಕುಮಾರ್ ರೈ ಮತ್ತು ಕಾರ್ಯದರ್ಶಿಗಳಾದ ಭಾರ್ಗವಿ ಮೇಡಂ ರವರು ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಶಾಲಾ ಶುಲ್ಕವನ್ನು ವಿತರಿಸಲಾಗುತ್ತಿದೆ. ಈ ಸಹಾಯಧನವು ನಮ್ಮ ಕಂಪನಿಯ ಸೋಶಿಯಲ್ ಕಾರ್ಪೊರೇಟ್ ರೆಸ್ಪಾನ್ಸಿಬಿಲಿಟಿ ಕಾರ್ಯಕ್ರಮದಡಿ ವಿತರಿಸಲಾಗುತ್ತಿದ್ದು, ಅದನ್ನು ಬೇರೆ ಇದಕ್ಕೆ ವ್ಯಯ ಮಾಡದೆ ವಿದ್ಯಾಭ್ಯಾಸಕ್ಕಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಯಾದ ಕುಮಾರ್ ಶೆಟ್ಟಿಗಾರ್ ಮಾತನಾಡಿ, ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ಸಂಸ್ಥೆಯ ಸಹಾಯಧನವನ್ನು ವ್ಯರ್ಥ ಮಾಡದೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಪಯೋಗಿಸಿಕೊಳ್ಳಬೇಕು ಹಾಗೂ ಏಕಪೋಷಕ ಮತ್ತು ದ್ವಿಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರದಿಂದ ಹಲವು ಸೌಲಭ್ಯಗಳಿವೆ. ಅವುಗಳನ್ನು ಪಡೆದುಕೊಳ್ಳಬೇಕು ಎಂದರು.
ಮತ್ತೊಬ್ಬ ಅಧಿಕಾರಿಯಾದ ವಜೀರ್ ಅಹಮದ್ ಮಾತನಾಡಿ, ಸರ್ಕಾರ ಮತ್ತು ಸಂಘ ಸಂಸ್ಥೆಗಳು ನೀಡುವ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಂಡು ಉನ್ನತ ಮಟ್ಟಕ್ಕೆ ಏರಬೇಕು ಎಂದರು.
ಸಿಸ್ಟರ್ ದುಲ್ಸಿನ್ ಮಾತನಾಡಿ, ಎಲ್ಲಾ ಮಕ್ಕಳು ಜೀವನದಲ್ಲಿ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಒಳ್ಳೆಯ ಪ್ರಜೆಗಳಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಸಂಸ್ಥೆಯ ಮಾರ್ಗದರ್ಶಕರದ ಮಧುಸೂದನ್, ಚೇತನ್, ಗಣೇಶ್ ಭಟ್ ಮುಂತಾದವರು ಭಾಗವಹಿಸಿದ್ದರು.

























