ಪುತ್ತೂರು : ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಇಬ್ಬರು ಸದಸ್ಯರ ನಿಧನದಿಂದಾಗಿ ತೆರವಾಗಿರುವ ಎರಡು ಸ್ಥಾನಗಳಿಗೆ ಜು.23 ರಂದು ನಡೆಯಲಿರುವ ಉಪಚುನಾವಣೆಗೆ ಆರ್ಯಾಪು ಗ್ರಾ.ಪಂ.ನಲ್ಲಿ 6 ಹಾಗೂ ನಿಡ್ಪಳ್ಳಿ ಗ್ರಾ.ಪಂ.ನಲ್ಲಿ 6 ನಾಮಪತ್ರ ಸಲ್ಲಿಕೆಯಾಗಿದ್ದು, ಇಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಆರ್ಯಾಪು ಗ್ರಾ.ಪಂ.ನಲ್ಲಿ 3 ಹಾಗೂ ನಿಡ್ಪಳ್ಳಿ ಗ್ರಾ.ಪಂ.ನಲ್ಲಿ 2 ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.
ಯಾರೆಲ್ಲಾ ನಾಮಪತ್ರ ಹಿಂಪಡೆದಿದ್ದಾರೆ..!!??
ನಿಡ್ಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳಾದ ಕುಮಾರ ನರಸಿಂಹ ಭಟ್ ಬುಲೇನಡ್ಕ, ಕೆ. ನಾರಾಯಣ ಪಾಟಾಳಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹರೀಶ್ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.
ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ನವೀನ, ಬಿಜೆಪಿ ಬೆಂಬಲಿತ ಅಭ್ಯರ್ಥಿ ವಸಂತ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.
ಎರಡು ಪಂಚಾಯತ್ ಗಳಲ್ಲೂ ಅಂತಿಮವಾಗಿ ಮೂರು ಮಂದಿ ಸ್ಪಧಿಗಳು ಕಣದಲ್ಲಿದ್ದಾರೆ.
ಜು.23 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ಪ್ರಕ್ರಿಯೆಗಳು ನಡೆಯಲಿದೆ. ಅವಶ್ಯವಿದ್ದರೆ ಜ.25 ರಂದು ಮರುಮತದಾನ ನಡೆದು ಜು.26 ರಂದು ಮತ ಎಣಿಕೆ ನಡೆಯಲಿದೆ.
ಅಂತಿಮ ಕಣದಲ್ಲಿ ಯಾರ್ಯಾರು !??
ನಿಡ್ಪಳ್ಳಿ ಗ್ರಾಮ ಪಂಚಾಯತ್ ನಿಂದ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಜಗನ್ನಾಥ್ ರೈ ಕೊಳೆಂಬೆತ್ತಿಮಾರು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚಂದ್ರಶೇಖರ ಪ್ರಭು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸತೀಶ್ ಶೆಟ್ಟಿ.
ಆರ್ಯಾಪು ಗ್ರಾಮ ಪಂಚಾಯತ್ ನಿಂದ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಜಗದೀಶ್ ಭಂಡಾರಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಿ.ಪುರುಷೋತ್ತಮ ಪ್ರಭು ಅಂತಿಮ ಕಣದಲ್ಲಿದ್ದಾರೆ.
ವಿಧಾನ ಸಭಾ ಚುನಾವಣೆಯಲ್ಲಿ ಯಾರಿಗೆ ಎಷ್ಟೇಷ್ಟು ಮತ..!?
ನಿಡ್ಪಳ್ಳಿ ಗ್ರಾಮ ಪಂಚಾಯತಿಯ 1ನೇ ವಾರ್ಡಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 607 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೊನ್ನೆ ನಡೆದ ವಿಧಾನಸಭಾ ಚುನಾವಣೆಯ ಲೆಕ್ಕಾಚಾರವನ್ನೇ ತೆಗೆದು ನೋಡಿದರೆ, ಈ ವಾರ್ಡಿನಲ್ಲಿ ಅತೀ ಹೆಚ್ಚು ಅಂದರೆ 297 ಮತ ಪಡೆದುಕೊಂಡಿರುವುದು ಕಾಂಗ್ರೆಸ್. ಎರಡನೇ ಸ್ಥಾನದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು, 291 ಮತ ಬಾಚಿಕೊಂಡಿದ್ದಾರೆ. ಮೂರನೇ ಸ್ಥಾನಕ್ಕೆ ಕುಸಿದಿರುವ ಬಿಜೆಪಿ 113 ಮತ ಪಡೆದುಕೊಂಡಿದೆ.
ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಅತೀ ಹೆಚ್ಚು ಮತ ಪಡೆದುಕೊಂಡಿದ್ದರು. 355 ಮತ ಪಡೆದುಕೊಂಡಿದ್ದು, ಪುತ್ತಿಲ ಪರಿವಾರ ಮತ್ತೊಮ್ಮೆ ಕಣಕ್ಕೆ ಧುಮುಕಿದೆ. ಬಿಜೆಪಿ 87 ಮತಗಳನ್ನಷ್ಟೇ ಪಡೆದುಕೊಳ್ಳಲು ಶಕ್ತವಾಗಿತ್ತು. ಆದರೆ ಕಾಂಗ್ರೆಸ್ 237 ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನದಲ್ಲಿತ್ತು. ಹಾಗಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ಆರ್ಯಾಪು ಗ್ರಾಪಂನ ವಾರ್ಡ್ ಮತ್ತೊಮ್ಮೆ ರಂಗೇರುತ್ತಿದೆ. ವಿಜಯ ಪತಾಕೆಯನ್ನು ಯಾರು ಹಾರಿಸಲಿದ್ದಾರೆಂದು ಕಾದು ನೋಡಬೇಕಿದೆ..
























