ಬೆಂಗಳೂರು : ಕರ್ನಾಟಕ ಸರಕಾರದ ಉಚಿತ ಯೋಜನೆಗಳಾದ ಗೃಹ ಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆ ಬಗ್ಗೆ ಸಾರ್ವಜನಿಕ ಜಾಲತಾಣಗಳಲ್ಲಿ ನಕಲಿ ಅಪ್ಲಿಕೇಷನ್ ಗಳು ಕಾರ್ಯಾಚರಿಸಲು ಆರಂಭಿಸಿವೆ.
ಈ ನಿಟ್ಟಿನಲ್ಲಿ ಅವುಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳಬಾರದು ಮತ್ತು ವಾಟ್ಸಾಪ್ ಮೂಲಕ ಈ ಬಗ್ಗೆ ನೀಡುವ ಯಾವುದೇ ಲಿಂಕ್‌ನ್ನು ಬಳಸಬಾರದು ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಒಂದು ವೇಳೆ ನೀವು ಇಂತಹ ತಪ್ಪುಗಳನ್ನು ಮಾಡಿದ್ದೇ ಆದಲ್ಲಿ ನಿಮ್ಮ ವೈಯುಕ್ತಿಕ ಮಾಹಿತಿಗಳು ಸೋರಿಕೆಯಾಗಬಹುದು. ನಿಮ್ಮ ವೈಯುಕ್ತಿಕ ವಿವರಗಳನ್ನು ನೀಡುವಂತೆ ತಿಳಿಸಿದ್ದಲ್ಲಿ ಕೂಡ ಯಾವುದೇ ಮಾಹಿತಿ ನೀಡಬಾರದು.
ಸಾರ್ವಜನಿಕರು ಇಂತಹ ನಕಲಿ ಅಪ್ಲಿಕೇಷನ್‌ಗಳ ಮೂಲಕ ತಮ್ಮ ವೈಯುಕ್ತಿಕ ಆಧಾರ್, ಪ್ಯಾನ್ ಕಾರ್ಡ್ ಮಾಹಿತಿ ನೀಡಿ ಮೋಸಹೋಗಬೇಡಿ.ಈ ಯೋಜನೆಗಳಿಗೆ ಸಂಬಂಧಿಸಿದಂತೆ ಸರಕಾರವು ಇದುವರೆಗೂ ಯಾವುದೇ ಆಂಡ್ರಾಯ್ಡ್ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಿರುವುದಿಲ್ಲ.
ಈ ಯೋಜನೆಗಳ ನೋಂದಣಿಗಾಗಿ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

























