ಮಂಗಳೂರು : ವ್ಯಕ್ತಿಯೋರ್ವನು ತನ್ನ ಚಪ್ಪಲಿ ಕಳವು ಆಗಿದೆ ಎಂದು ಪೊಲೀಸರ ತುರ್ತು ಸ್ಪಂದನಾ ನಂಬರ್ 112ಗೆ ಕರೆ ಮಾಡಿದ್ದು, ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸಿದ್ದರು.
ಮಂಗಳೂರು ನಗರದ ಬಾಲಂಭಟ್ ಹಾಲ್‌ನಲ್ಲಿ ಕಾರ್ಯಕ್ರಮಕ್ಕೆ ಬಂದ ವ್ಯಕ್ತಿಯ ಚಪ್ಪಲಿ ಕಾಣೆಯಾಗಿದ್ದು, ಬಳಿಕ ಎಷ್ಟೇ ಹುಡುಕಾಡಿದರೂ ಸಿಗದೇ ಇದ್ದಾಗ ಆತ ನೇರವಾಗಿ ಪೊಲೀಸ್ ಕಂಟ್ರೋಲ್ ರೂಂ ನಂಬರ್ 112ಗೆ ಕರೆ ಮಾಡಿ ದೂರಿದ್ದಾರೆ.
ದೂರು ಬಂದ ಕೂಡಲೇ ಬಂದರು ಠಾಣೆ ಪೊಲೀಸರು ಬಾಲಂಭಟ್ ಹಾಲ್‌ಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಚಪ್ಪಲಿ ಕಳೆದುಕೊಂಡ ವ್ಯಕ್ತಿ, ತಾನು ಇಲ್ಲೇ ಚಪ್ಪಲಿ ಇರಿಸಿದ್ದು, ಈಗ ಅದು ನಾಪತ್ತೆಯಾಗಿದೆ.
ಯಾರೋ ಹಾಕಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಬಳಿಕ ಪೊಲೀಸರು ಹಾಲ್‌ನಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಮಾರ್ಕೆಟ್‌ನಿಂದ ಸಾಮಾಗ್ರಿ ಹಾಕಲು ಬಂದ ವ್ಯಕ್ತಿಯೊಬ್ಬ ಚಪ್ಪಲಿ ಹಾಕಿಕೊಂಡು ತೆರಳಿರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಠಾಣೆಗೆ ಬಂದು ದೂರು ನೀಡುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ದೂರು ನೀಡಲು ವ್ಯಕ್ತಿ ನಿರಾಕರಿಸಿದ್ದಾನೆ. ಪೊಲೀಸರು ಚಪ್ಪಲಿ ಕಳವು ದೂರಿಗೂ ಕೂಡಲೇ ಸ್ಪಂದಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

























