ಪುತ್ತೂರು : ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಇಬ್ಬರು ಸದಸ್ಯರ ನಿಧನದಿಂದಾಗಿ ತೆರವಾಗಿರುವ ಎರಡು ಸ್ಥಾನಗಳಿಗೆ ನಾಳೆ (ಜು.23) ಉಪಚುನಾವಣೆ ನಡೆಯಲಿದೆ.
ಆರ್ಯಾಪು ಗ್ರಾ.ಪಂ.ನಲ್ಲಿ 3 ಹಾಗೂ ನಿಡ್ಪಳ್ಳಿ ಗ್ರಾ.ಪಂ.ನಲ್ಲಿ 3 ಮಂದಿ ಕಣದಲ್ಲಿದ್ದಾರೆ.
ಅಂತಿಮ ಕಣದಲ್ಲಿ ಯಾರ್ಯಾರು !??
ನಿಡ್ಪಳ್ಳಿ ಗ್ರಾಮ ಪಂಚಾಯತ್ ನಿಂದ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಜಗನ್ನಾಥ್ ರೈ ಕೊಳೆಂಬೆತ್ತಿಮಾರು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚಂದ್ರಶೇಖರ ಪ್ರಭು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸತೀಶ್ ಶೆಟ್ಟಿ.

ಆರ್ಯಾಪು ಗ್ರಾಮ ಪಂಚಾಯತ್ ನಿಂದ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಜಗದೀಶ್ ಭಂಡಾರಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಿ.ಪುರುಷೋತ್ತಮ ಪ್ರಭು ಅಂತಿಮ ಕಣದಲ್ಲಿದ್ದಾರೆ.
ಯಾರಿಗೆ ಯಾವ ಚಿಹ್ನೆ..!??
ನಿಡ್ಪಳ್ಳಿ ಗ್ರಾಮ ಪಂಚಾಯತ್ ನಿಂದ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಜಗನ್ನಾಥ್ ರೈ ಕೊಳೆಂಬೆತ್ತಿಮಾರು- ಬ್ಯಾಟ್, ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ ಪ್ರಭು – ತೆಂಗಿನತೋಟ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸತೀಶ್ ಶೆಟ್ಟಿ – ಮೇಜು
ಆರ್ಯಾಪು ಗ್ರಾಮ ಪಂಚಾಯತ್ ನಿಂದ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ-ಬ್ಯಾಟ್, ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದೀಶ್ ಭಂಡಾರಿ- ವಜ್ರ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ. ಪುರುಷೋತ್ತಮ ಪ್ರಭು-ಮೇಜು ಚಿಹ್ನೆ ಪಡೆದುಕೊಂಡಿದ್ದಾರೆ.
ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಯಾರಿಗೆ ಎಷ್ಟೇಷ್ಟು ಮತ..!?
ನಿಡ್ಪಳ್ಳಿ ಗ್ರಾಮ ಪಂಚಾಯತಿಯ 1ನೇ ವಾರ್ಡಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 607 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೊನ್ನೆ ನಡೆದ ವಿಧಾನಸಭಾ ಚುನಾವಣೆಯ ಲೆಕ್ಕಾಚಾರವನ್ನೇ ತೆಗೆದು ನೋಡಿದರೆ, ಈ ವಾರ್ಡಿನಲ್ಲಿ ಅತೀ ಹೆಚ್ಚು ಅಂದರೆ 297 ಮತ ಪಡೆದುಕೊಂಡಿರುವುದು ಕಾಂಗ್ರೆಸ್. ಎರಡನೇ ಸ್ಥಾನದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು, 291 ಮತ ಬಾಚಿಕೊಂಡಿದ್ದಾರೆ. ಮೂರನೇ ಸ್ಥಾನಕ್ಕೆ ಕುಸಿದಿರುವ ಬಿಜೆಪಿ 113 ಮತ ಪಡೆದುಕೊಂಡಿದೆ.
ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಅತೀ ಹೆಚ್ಚು ಮತ ಪಡೆದುಕೊಂಡಿದ್ದರು. 355 ಮತ ಪಡೆದುಕೊಂಡಿದ್ದು, ಪುತ್ತಿಲ ಪರಿವಾರ ಮತ್ತೊಮ್ಮೆ ಕಣಕ್ಕೆ ಧುಮುಕಿದೆ. ಬಿಜೆಪಿ 87 ಮತಗಳನ್ನಷ್ಟೇ ಪಡೆದುಕೊಳ್ಳಲು ಶಕ್ತವಾಗಿತ್ತು. ಆದರೆ ಕಾಂಗ್ರೆಸ್ 237 ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನದಲ್ಲಿತ್ತು. ಹಾಗಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ಆರ್ಯಾಪು ಗ್ರಾಪಂನ ವಾರ್ಡ್ ಮತ್ತೊಮ್ಮೆ ರಂಗೇರುತ್ತಿದೆ. ವಿಜಯ ಪತಾಕೆಯನ್ನು ಯಾರು ಹಾರಿಸಲಿದ್ದಾರೆಂದು ಕಾದು ನೋಡಬೇಕಿದೆ.
ಚುನಾವಣೆ ನಡೆಯುವ ಪಂಚಾಯತ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಬಂದ್ :
ಪುತ್ತೂರು ತಾಲೂಕಿನ ನಿಡ್ಪಳ್ಳಿ, ಆರ್ಯಾಪು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.23 ರಂದು ನಡೆಯಲಿರುವ ಉಪ ಚುನಾವಣೆಯ ಮತದಾನವು ಮುಕ್ತ ಹಾಗೂ ನ್ಯಾಯಸಮ್ಮತ ನಿಷ್ಪಕ್ಷಪಾತದಿಂದ ಕೂಡಿದ ಶಾಂತಿಯುತ ವಾತಾವರಣದಲ್ಲಿ ನಡೆಯುವ ನಿಟ್ಟಿನಲ್ಲಿ ಚುನಾವಣೆ ನಡೆಯಲಿರುವ ಪಂಚಾಯತ್ ವ್ಯಾಪ್ತಿಯಲ್ಲಿ ಜು.21ರ ಸಂಜೆಯಿಂದ ಮದ್ಯ ಮಾರಾಟ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಆದೇಶಿಸಿದ್ದಾರೆ.
ಇಂದು ಮಸ್ಟರಿಂಗ್ :
ಪುತ್ತೂರಿನ ತಾಲೂಕಿನ ನಿಡ್ಪಳ್ಳಿ, ಆರ್ಯಾಪು ಗ್ರಾಮ ಪಂಚಾಯತ್ ಗಳಲ್ಲಿ ತೆರವಾದ 2 ಸ್ಥಾನಗಳಿಗೆ ಜು.23 ರಂದು ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿದಂತೆ ಮಸ್ಟರಿಂಗ್ ಕಾರ್ಯಗಳು ಜು.22 ರಂದು ಬೆಳಿಗ್ಗೆ ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಸಭಾಂಗಣದಲ್ಲಿ ನಡೆಯಲಿದೆ.
ತಹಶೀಲ್ದಾರ್ ಶಿವಶಂಕರ್ ನೇತೃತ್ವದಲ್ಲಿ ಮಸ್ಟರಿಂಗ್ ಕಾರ್ಯಗಳು ನಡೆಯಲಿದೆ. ಜು.23 ರಂದು ಸಂಜೆ ಡಿಮಸ್ಟರಿಂಗ್ ಕಾರ್ಯಗಳು ನಡೆಯಲಿದೆ.
ನಿಡ್ಪಳ್ಳಿಯಲ್ಲಿ ಚುನಾವಣಾಧಿಕಾರಿಯಾಗಿ ತಾಲೂಕು ಪಂಚಾಯತ್ ಯೋಜನಾಧಿಕಾರಿ ಸುಕನ್ಯಾ ಹಾಗೂ ಪಿಡಿಓ ಸಂಧ್ಯಾಲಕ್ಷ್ಮೀ, ಆರ್ಯಾಪುನಲ್ಲಿ ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಹಾಗೂ ಉಪ ಚುನಾವಣಾಧಿಕಾರಿಯಾಗಿ ಪಿಡಿಓ ನಾಗೇಶ್ ಎಂ. ಕರ್ತವ್ಯ ನಿರ್ವಹಿಸಲಿದ್ದಾರೆ.
ಜು.23 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ಪ್ರಕ್ರಿಯೆಗಳು ನಡೆಯಲಿದೆ. ಅವಶ್ಯವಿದ್ದರೆ ಜು.25 ರಂದು ಮರುಮತದಾನ ನಡೆದು ಜು.26 ರಂದು ಮತ ಎಣಿಕೆ ನಡೆಯಲಿದೆ.
























