ಪುತ್ತೂರು : ತಾಲೂಕಿನ ನಿಡ್ಪಳ್ಳಿ ಹಾಗೂ ಆರ್ಯಾಪು ಗ್ರಾ.ಪಂ.ಗಳಲ್ಲಿ ತೆರವಾಗಿರುವ ತಲಾ ಒಂದು ಸ್ಥಾನಗಳಿಗೆ ಜು.23 ರಂದು ನಡೆದ ಉಪ ಚುನಾವಣೆಯು ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ನಿಡ್ಪಳ್ಳಿಯಲ್ಲಿ ಶೇ.87.14 ಹಾಗೂ ಆರ್ಯಾಪುನಲ್ಲಿ ಶೇ.80.73 ಮತದಾನವಾಗಿದೆ.
ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆಗಳು ಪ್ರಾರಂಭಗೊಂಡಿದ್ದು, ಸಂಜೆ 5 ಗಂಟೆಯ ತನಕ ನಡೆಯಿತು. ನಿಡ್ಪಳ್ಳಿ ಗ್ರಾ.ಪಂನ ಉಪ ಚುನಾವಣೆಯಲ್ಲಿ ನಿಡ್ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆರ್ಯಾಪು ಗ್ರಾ.ಪಂನ ಉಪ ಚುನಾವಣೆಗೆ ಕುಂಜೂರುಪಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಪ್ರಕ್ರಿಯೆಗಳು ನಡೆಯಿತು.
ಒಟ್ಟು 607 ಮತದಾರರನ್ನು ಹೊಂದಿರುವ ನಿಡ್ಪಳ್ಳಿ ವಾರ್ಡ್ 1ರ ಉಪ ಚುನಾವಣೆಯಲ್ಲಿ 254 ಪುರುಷರು ಹಾಗೂ 257 ಮಹಿಳೆಯರು ಸೇರಿದಂತೆ ಒಟ್ಟು 529 ಮಂದಿ ಮತ ಚಲಾಯಿಸಿದ್ದಾರೆ.
ಆರ್ಯಾಪು ಗ್ರಾ.ಪಂನ ವಾರ್ಡ್ 2ರಲ್ಲಿ ಒಟ್ಟು 1237 ಮಂದಿ ಮತದಾರರನ್ನು ಹೊಂದಿದ್ದು, ಇದರಲ್ಲಿ 515 ಪುರುಷರು ಹಾಗೂ 484 ಮಹಿಳೆಯರು ಸೇರಿದಂತೆ ಒಟ್ಟು 999 ಮಂದಿ ಮತದಾರರು ಮತ ಚಲಾಯಿಸಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದ್ದು, ಮತದಾನ ಕೇಂದ್ರದ ಬಳಿ ಮೂರು ಪಕ್ಷಗಳ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು.























