ಪುತ್ತೂರು : ಪ್ರತಿವರ್ಷದಂತೆ ಈ ಬಾರಿಯೂ ಪುತ್ತೂರಿನ ಮಾಜಿ ಸೈನಿಕರ ಸಂಘ, ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಜುಲೈ 26 ರಂದು ಬೆಳಗ್ಗೆ 9 ಗಂಟೆಗೆ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ನಡೆಯಲಿದೆ.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ, ಸಹಾಯಕ ಆಯುಕ್ತ ಗಿರೀಶ್ ನಂದನ್, ಉಡುಪಿಯ ವಾಗ್ಮಿ ಶ್ರೀಕಾಂತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಈ ಸ್ಮಾರಕವನ್ನು ನಿರ್ಮಾಣ ಮಾಡಿಕೊಟ್ಟವರು ಪುತ್ತೂರಿನ ಶ್ರೀರಾಮ್ ಕನ್ಸ್‌ಕ್ಷನ್‌ನ ಮಾಲಕರಾದ ಇಂಜಿನಿಯರ್ ಪ್ರಸನ್ನ ಎಂ ಭಟ್. ಅತ್ಯಂತ ಆಕರ್ಷಕವಾಗಿ, ಎಲ್ಲರ ಗಮನ ಸೆಳೆಯುವ ರೀತಿಯಲ್ಲಿ ಈ ಸ್ಮಾರಕದ ನಿರ್ಮಾಣ ನಡೆದಿದೆ.
ಪುತ್ತೂರಿನ ಶಿಲ್ಪಾ ಗ್ಯಾಸ್ ಎಜೆನ್ಸಿಯ ಮಾಲಕ ಉಮಾನಾಥ್ ಅವರು ತಮ್ಮ ಏಜೆನ್ಸಿ ವತಿಯಿಂದ ಈ ಸ್ಮಾರಕದಲ್ಲಿ ಜ್ಯೋತಿ ಬೆಳಗುವ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಿಕೊಟ್ಟಿದ್ದಾರೆ. ಸಿಲಿಂಡರ್ ನಿಂದ ಜ್ಯೋತಿಯೆಡೆಗೆ ಗ್ಯಾಸ್ ಪೈಪ್ ಲೈನ್ ಜೋಡಣೆ ಮಾಡಿಕೊಟ್ಟು ನಿರಂತರವಾಗಿ ಜ್ಯೋತಿ ಉರಿಯುವಂತೆ ಮಾಡಿದ್ದಾರೆ.
ಪುತ್ತೂರಿನ ಹೃದಯ ಭಾಗದಲ್ಲಿರುವ ಕಿಲ್ಲೆ ಮೈದಾನದ ಬಳಿಯ ಸುಮಾರು ನಲವತ್ತು ಸೆಂಟ್ಸ್ ಸರ್ಕಾರಿ ಜಾಗದಲ್ಲಿ ಈ ಅಮರ್ ಜವಾನ್ ಜ್ಯೋತಿ ಯೋಧ ಸ್ಮಾರಕ ರೂಪುಗೊಂಡಿದೆ. ಪ್ರವಾಸಾರ್ಥವಾಗಿ ಪುತ್ತೂರಿಗೆ ಬರುವ ಯಾರೇ ಆಗಲಿ ಈ ಸ್ಮಾರಕವನ್ನು ಕಂಡು ಕೈಮುಗಿಯದಿದ್ದರೆ ಅಷ್ಟರಮಟ್ಟಿಗೆ ಅವರ ಪ್ರವಾಸ ಅಪೂರ್ಣವೇ.., ದೇಶದಲ್ಲಿ ಖಾಸಗಿಯಾಗಿ ನಿರ್ಮಾಣಗೊಂಡಿರುವ ಏಕೈಕ ಅಮರ್ ಜವಾನ್ ಜ್ಯೋತಿ ಸ್ಮಾರಕ ಇದು ಎಂಬುದು ಇದರ ಹೆಚ್ಚುಗಾರಿಕೆ.
ಈ ಸ್ಮಾರಕವನ್ನು ನಿರ್ಮಾಣ ಮಾಡಿದ್ದಲ್ಲದೆ ಅದರ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವುದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ದೇಶದ ಬಗೆಗೆ, ಸೈನಿಕರ ಬಗೆಗೆ ಅಪಾರ ಕಾಳಜಿ, ಪ್ರೀತಿ ಹೊಂದಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿರುವ ಸುಬ್ರಹ್ಮಣ್ಯ ನಟ್ಟೋಜರಿಗೆ ಈ ಸ್ಮಾರಕವನ್ನು ನಿರ್ಮಾಣಮಾಡಬೇಕೆಂಬ ಕನಸು ಮೂಡಿದ್ದೇ ಒಂದು ರೋಚಕ ವಿಚಾರ.
ಈ ಸ್ಮಾರಕದ ಬಳಿ ನಡೆಯುವ ಬಹುತೇಕ ಎಲ್ಲಾ ಕಾರ್ಯಕ್ರಮಗಳಿಗೂ ಪುತ್ತೂರಿನ ಮಾಜಿ ಸೈನಿಕರ ಸಂಘ ಸಹಯೋಗವನ್ನು ಒದಗಿಸುತ್ತಿದೆ. ಅಂತೆಯೇ ಪುತ್ತೂರಿನ ಮಾಜಿ ಸೈನಿಕರು ಇಂತಹದ್ದೊಂದು ಸ್ಮಾರಕ ರಚನೆಯಾಗಿದ್ದರ ಬಗೆಗೆ ಅಪಾರ ಹೆಮ್ಮೆ ಹಾಗೂ ಕೃತಜ್ಞತೆ ವ್ಯಕ್ತಪಡಿಸುತ್ತಾರೆ.


























