ಹಾಯ್.. ಹಲೋ ಓಕೆ.. ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಕೆಂಪು ಬಣ್ಣದ ಹಾರ್ಟ್ ಸಿಂಬಲ್ ಕಳುಹಿಸಿದವರಿಗೆ ಜೈಲು ಶಿಕ್ಷೆ ಗ್ಯಾರಂಟಿ. ಹೆದರಬೇಡಿ ಇಂತಹ ಕಠಿಣವಾದ ಕಾನೂನು ಜಾರಿ ಆಗ್ತಿರೋದು ನಮ್ಮ ದೇಶದಲ್ಲಿ ಅಲ್ಲ. ಕುವೈತ್‌ನಲ್ಲಿ ಯಾರಾದ್ರೂ ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರಿಗೆ ಹಾರ್ಟ್ ಸಿಂಬಲ್ ಕಳುಹಿಸಿದ್ರೆ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ. ಅಷ್ಟೇ ಅಲ್ಲ ದಂಡವನ್ನೂ ಕಟ್ಟಬೇಕಾಗಿದೆ. ಇಂತಹದೊಂದು ಕಾನೂನನ್ನು ಕುವೈತ್ ಸರ್ಕಾರ ಜಾರಿಗೆ ತಂದಿದೆ. ಸೌದಿ ಅರೇಬಿಯಾದಲ್ಲೂ ಕೂಡ ಈ ರೀತಿಯ ನಡವಳಿಕೆಯನ್ನು ಅಪರಾಧ ಎಂದು ಪರಿಗಣಿಸಲಾಗುತ್ತಿದೆ.
ಕುವೈತ್ ಮತ್ತು ಸೌದಿ ಅರೇಬಿಯಾಗಳಲ್ಲಿ ಇನ್ಮುಂದೆ ಹುಡುಗಿಯರಿಗೆ ಹಾರ್ಟ್ ಎಮೋಜಿಗಳನ್ನು ಕಳಿಸುವಂತಿಲ್ಲ. ಪ್ರಮುಖ ಸೋಷಿಯಲ್ ಮೀಡಿಯಾಗಳಾದ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಹುಡುಗಿಯರಿಗೆ ಹಾರ್ಟ್ ಸಿಂಬಲ್ ಕಳುಹಿಸಿದ್ರೆ ಅಪರಾಧವೆಂದು ಪರಿಗಣಿಸಲಾಗುತ್ತಿದೆ. ಕುವೈತ್‌ನಲ್ಲಿ ಈ ರೀತಿಯ ಹೃದಯದ ಎಮೋಜಿಯನ್ನು ಕಳುಹಿಸಿದರೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2,000 ಕುವೈತ್ ದಿನಾರ್‌ಗಳ ದಂಡ ಕಟ್ಟಬೇಕಾಗಿದೆ.
ಸೌದಿ ಅರೇಬಿಯಾದಲ್ಲಿ ಈ ಕಾನೂನು ಮತ್ತಷ್ಟು ಕಠಿಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರಿಗೆ ಹಾರ್ಟ್ ಸಿಂಬಲ್ ಕಳುಹಿಸಿದರೆ 2ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಇದರ ಜೊತೆ 1 ಲಕ್ಷ ಸೌದಿ ರಿಯಾಲ್‌ಗಳನ್ನು ದಂಡವಾಗಿ ಕಟ್ಟಬೇಕಾಗುತ್ತದೆ. ಸೌದಿ ಅರೇಬಿಯಾದ ವಂಚನೆಯ ವಿರೋಧಿ ಸಂಘದ ಸದಸ್ಯ ಈ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಈ ದೇಶದಲ್ಲಿ ಆನ್‌ಲೈನ್ ಚಾಟಿಂಗ್‌ನಲ್ಲಿ ಯಾರಾದ್ರೂ ಹಾರ್ಟ್ ಎಮೋಜಿಗಳನ್ನು ಕಳುಹಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೆಸೇಜ್ ಕಳುಹಿಸುವವರ ವಿರುದ್ಧ ಹುಡುಗಿಯರು ದೂರು ನೀಡಿದರೆ ಅದನ್ನು ಕಿರುಕುಳದ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದೇ ರೀತಿಯ ಪ್ರಕರಣ ಪದೇ ಪದೆ ಮರುಕಳಿಸಿದರೆ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ, 3 ಲಕ್ಷ ಸೌದಿ ರಿಯಾಲ್‌ಗಳನ್ನು ದಂಡವಾಗಿ ಕಟ್ಟಬೇಕಾಗುತ್ತದೆ.

























