ಪುತ್ತೂರು : ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ 2011ರಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಮುಂದಿನ ಹೋರಾಟಕ್ಕೆ ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಗೌಡ ಸಮಾಜದಿಂದ ಸಭೆ ಭಾನುವಾರ ನಡೆದಿದ್ದು, ಜಿಲ್ಲಾ ಮಟ್ಟದ ಹೋರಾಟ ಸಮಿತಿಯನ್ನು ರಚಿಸಲಾಯಿತು.
ಹೋರಾಟ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ಬಾಲಕೃಷ್ಣ ಗೌಡ ರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ವಿವಿಧ ತಾಲೂಕಿನ ಸಂಘದ ಅಧ್ಯಕ್ಷರುಗಳು ಸಂಚಾಲಕರಾಗಿರುತ್ತಾರೆ ಎಂದು ತಿಳಿಸಲಾಯಿತು. ಕಾನೂನಾತ್ಮಕ ಹೋರಾಟಕ್ಕೆ ನ್ಯಾಯವಾದಿಗಳ ಸಮಿತಿಯನ್ನು ಪ್ರತ್ಯೇಕವಾಗಿ ರಚಿಸಲಾಯಿತು.
ಸಭೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಸಹಿತ ಸಂಬಂಧಿಕರು ಪಾಲ್ಗೊಂಡು ‘ನಿಜವಾದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಹೋರಾಟ ಮಾಡಿ ನಮಗೆ ನ್ಯಾಯ ಕೊಡಿಸಿಕೊಡಿ’ ಎಂದು ವಿನಂತಿಸಿದರು.
ಪುತ್ತೂರು ಒಕ್ಕಲಿಗ ಗೌಡ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಬೆಳ್ತಂಗಡಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಮಂಗಳೂರು ಅಧ್ಯಕ್ಷ ಗುರುದೇವ್, ಪುತ್ತೂರು ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ವಕೀಲ ನವೀನ್, ಪ್ರವೀಣ್ ಕುಂಟ್ಯಾನ, ಪುತ್ತೂರು ಯುವ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಪುರುಷೋತ್ತಮ ಮುಂಗ್ಲಿಮನೆ, ಕಿರಣ್ ಬುಡ್ಡೆಗುತ್ತು, ಗೋಪಾಲಕೃಷ್ಣ, ಸುಬ್ರಾಯ, ತಿಮ್ಮಪ್ಪ ಗೌಡ, ಲೀಲಾವತಿ ಮುಂತಾದವರು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.
ಮಂಗಳೂರು, ಸುಳ್ಯ, ಬೆಳ್ತಂಗಡಿ, ಕಡಬ, ಪುತ್ತೂರು ತಾಲೂಕಿನ ಒಕ್ಕಲಿಗ ಗೌಡ ಸಮಾಜದವರು ಸಭೆಯಲ್ಲಿ ಪಾಲ್ಗೊಂಡಿದ್ದರು.