ಪುತ್ತೂರು : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ವರ್ತುಲದ ಶಿಕ್ಷಕರಿಗಾಗಿ ಒಂದು ದಿನದ ಕರ‍್ಯಾಗಾರ ‘Pedagogical Training for Teachers’ ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವೇಕಾನಂದ ವರ್ತುಲದ ಅಡಿಯಲ್ಲಿ ಬರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ, ವಿವೇಕಾನಂದ ಸಿಬಿಎಸ್ಸಿ ಸ್ಕೂಲ್, ನೆಹರೂನಗರ – ಈ ಶಾಲೆಗಳ 153 ಅಧ್ಯಾಪಕರುಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿರುವ ಸತೀಶ್ ರಾವ್ ಅವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿಕೊಟ್ಟು, ವಿದ್ಯಾರ್ಥಿಗಳಲ್ಲಿ ಭಾವನಾತ್ಮಕ, ಸಾಮಾಜಿಕವಾದ ಬೆಳವಣಿಗೆ ಪ್ರಾಥಮಿಕ ಹಂತದಲ್ಲಿ ಆಗಬೇಕಾದರೆ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಗಾರಗಳು ಅತಿ ಅಗತ್ಯ. ಶಿಕ್ಷಕರ ಜ್ಞಾನ, ಆಲೋಚನೆಗಳು ಅಗಾಧವಾಗುವುದರೊಂದಿಗೆ ದೇಶದ ಪ್ರಗತಿಯಾಗಲಿ ಎಂಬುದಾಗಿ ಶುಭ ಹಾರೈಸಿದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವಂತಹ ಡಾ.ಎಂ.ಶಿವಪ್ರಕಾಶ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ದೇಶ ಸಮೃದ್ಧ ಸದೃಢವಾಗುವಂತಹ ಕಡೆಗೆ ಶಿಕ್ಷಣವನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಅತಿ ಪ್ರಮುಖವಾದದ್ದು, ಶಿಕ್ಷಕರು, ಗುರುಗಳಾಗಿ, ಪರಮಗುರುಗಳಾಗಿ, ಪರಾತ್ಪರ ಗುರುಗಳಾಗಿಗಿ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ ಎಂದರು.

ಈ ಶೈಕ್ಷಣಿಕ ಕಾರ್ಯಗಾರ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯಲ್ಲಿ, ಇಂದ್ರಪ್ರಸ್ಥ ವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾಗಿರುವಂತಹ ಜಯಪ್ರಸಾದ್ ಕಡಮ್ಮಾಜೆ, ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ವಸಂತಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರುಗಳಾದ ಸಂಧ್ಯಾ, ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಮುಖ್ಯ ಗುರುಗಳಾದ ಸಿಂಧು ವಿ.ಜಿ, ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯ ಗುರುಗಳಾದ ವೀಣಾ ಆರ್ ಪ್ರಸಾದ್, ವಿವೇಕಾನಂದ ವರ್ತುಲದ ಸಂಯೋಜಕರಾಗಿರುವಂತಹ ರೇಖಾ ಆಚಾರ್ಯ ಉಪಸ್ಥಿತರಿದ್ದರು.

ಈ ಶೈಕ್ಷಣಿಕ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸೂರ್ಯನಾರಾಯಣ ಕಶೆಕೋಡಿ, ರಾಜೇಶ್ ಶೆಟ್ಟಿ ಹಾಗೆ ಶ್ರದ್ಧಾ ಎಲ್ ರೈ ಭಾಗವಹಿಸಿದ್ದರು.
ಕಾರ್ಯಗಾರವು ಮೂರು ಅವಧಿಯಲ್ಲಿ ನಡೆದಿದ್ದು ಮೊದಲ ಅವಧಿಯಲ್ಲಿ ಕಶೆಕೊಡಿ ಸೂರ್ಯನಾರಾಯಣ ಭಟ್ ಅವರು ಭಾರತೀಯ ಸಂಸ್ಕೃತಿ ಮತ್ತು ಶಿಕ್ಷಣ ಎಂಬ ವಿಷಯದ ಬಗ್ಗೆ ಮಾತನಾಡಿ, ಭದ್ರ ಭಾರತದ ಬುನಾದಿಯನ್ನು ಹೊತ್ತಿರುವ ಶಿಕ್ಷಕರು ಮಗುವಿಗೆ ದಾರಿ ತೋರಿಸುವ ದೀಪವಾಗಬೇಕು ಹಾಗೆ ವಿದ್ಯೆಯಿಂದ ವ್ಯಕ್ತಿ ನಿರ್ಮಾಣ, ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣವಾಗುವಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಯಾರುಗೊಳಿಸಬೇಕಾಗಿದೆ. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ನಮ್ಮ ಸಂಸ್ಕೃತಿಯೇ ನಮಗೆ ಶಿಕ್ಷಣ ಎಂಬ ಅರಿವನ್ನು ಈ ಕಾಲಘಟ್ಟದಲ್ಲಿ ಮೂಡಿಸುವುದು ಅತಿ ಅನಿವಾರ್ಯವಾಗಿದೆ ಎಂದರು.
ಎರಡನೆಯ ಅವಧಿಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಜೇಶ್ ಶೆಟ್ಟಿ ಮಂಗಳೂರು ಇವರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಯಾವ ರೀತಿ ಬೆಳೆಸಬಹುದು, ಅವರಲ್ಲಿ ಪ್ರಶ್ನೆಗಳನ್ನು ಕೇಳುವಂತಹ ಗುಣಗಳನ್ನು ಶಿಕ್ಷಕರಾದ ನಾವು ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ತಿಳಿಸಿದರು. ನಮ್ಮ ಆಚಾರ, ವಿಚಾರ, ನಂಬಿಕೆ ಎಲ್ಲದರ ಹಿಂದಿನ ವೈಜ್ಞಾನಿಕ ಅರಿವು ಏನು ಎಂಬ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರವನ್ನು ವಿದ್ಯಾರ್ಥಿಗಳು ಕಂಡುಕೊಳ್ಳುವಲ್ಲಿ ಶಿಕ್ಷಕರು ಅವರಿಗೆ ಮಾರ್ಗದರ್ಶನವನ್ನು ನೀಡಬೇಕಾಗಿದೆ, ಅದಕ್ಕಾಗಿ ಶಿಕ್ಷಕನಾದವನಲ್ಲಿ ಬೇಕಾದ ಗುಣಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು.

ಮೂರನೇ ಅವಧಿಯ ಸಂಪನ್ಮೂಲ ವ್ಯಕ್ತಿಯಾದ ಶ್ರದ್ಧಾ ಎಲ್. ರೈ ವಿದ್ಯಾರ್ಥಿಗಳಲ್ಲಿ ಕಲಿಕಾನ್ಯೂನತೆಯ ಬಗ್ಗೆ ಮಾಹಿತಿಯನ್ನು ನೀಡಿ, ಅವುಗಳನ್ನು ಬಗೆಹರಿಸುವ ಮಾರ್ಗೋಪಾಯಗಳ ಬಗ್ಗೆ ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ವಿವೇಕಾನಂದ ಆಡಳಿತ ಮಂಡಳಿಯ ಸದಸ್ಯರಾಗಿರುವ ಅಮೃತ ಪ್ರಸಾದ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರಾದ ಸತೀಶ್ ಕುಮಾರ್ ರೈ, ಸಂಧ್ಯಾ, ಮಮತಾ ಉಪಸ್ಥಿತರಿದ್ದರು.