ಬೆಳ್ತಂಗಡಿ : ಮಹಿಳೆಯೋರ್ವರ ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ನಿವಾಸಿ ಮಹಿಳೆಯೋರ್ವರು ನೀಡಿದ ದೂರಿನ ಮೇರೆಗೆ ಚಂದ್ರಶೇಖರ ಶೆಟ್ಟಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆ ತನ್ನ ಮನೆ ಸಮೀಪವಿದ್ದ ವೇಳೆ ಚಂದ್ರಶೇಖರ ಶೆಟ್ಟಿ ಎಂಬಾತನು ಮಹಿಳೆಯ ಮೊಬೈಲಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದು. ಆ ಬಳಿಕ ಸ್ವಲ್ಪ ಸಮಯದಲ್ಲಿ ಆರೋಪಿಯು ತನ್ನ ಮೋಟಾರು ಸೈಕಲಿನಲ್ಲಿ ಮಹಿಳೆಯ ಮನೆಗೆ ಬಂದು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಗೆ ಹಾಗೂ ಅವರ ಮಗ ಮತ್ತು ಗಂಡನಿಗೆ ಕೈಯಿಂದ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ, ಮನೆಯ ಬಾಗಿಲನ್ನು ಮುರಿದು ಮನೆಯೊಳಗೆ ಶೋಕೇಸ್ ಗೆ ಹಾನಿ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಕಲಂ: 448, 323, 324, 427, 504, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.