ಪುತ್ತೂರು : ಮಾಣಿಲ ಶ್ರೀಧಾಮದಲ್ಲಿ ಆ.25ರ ವರೆಗೆ ನಡೆಯುವ 48 ದಿನಗಳ ಪರ್ಯಂತ ಸಾಮೂಹಿಕ ಶ್ರೀಲಕ್ಷ್ಮೀಪೂಜೆ ಹಾಗೂ ಆ.25 ರಿಂದ ಆ.27ರವರೆಗೆ ಶ್ರೀವರಮಹಾಲಕ್ಷ್ಮೀ ವೃತಾಚರಣೆ ಬೆಳ್ಳಿ ಹಬ್ಬದ ಕಾರ್ಯಕ್ರಮದ ಅಂಗವಾಗಿ ಪುತ್ತೂರು ಹೊರೆಕಾಣಿಕೆ ಸಮಿತಿ ನೇತೃತ್ವದಲ್ಲಿ ಭಕ್ತ ಜನರ ಸಹಕಾರದೊಂದಿಗೆ ಆ.20 ರಂದು ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಹೊರೆಕಾಣಿಕೆ ಪುತ್ತೂರು ವಲಯ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಹೇಳಿದರು.
ಬಂಟ್ವಾಳ ತಾಲೂಕಿನ ಮಾಣಿಲದಲ್ಲಿರುವ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರವು ನಾಡಿನೆಲ್ಲೆಡೆ ದೇವಸ್ಥಾನ, ದೈವಸ್ಥಾನ, ಮಠ ಮಂದಿರಗಳ ನವೀಕರಣ, ಪುನರ್ ನಿರ್ಮಾಣ, ಜೀರ್ಣೋದ್ದಾರ ಕಾರ್ಯಗಳಿಗೆ ಮಾರ್ಗದರ್ಶನ ನೀಡಿ ಸಾಮಾನ್ಯನಂತೆ ಭಕ್ತರೊಡನೆ ಸ್ಪಂದಿಸುವ ಸಂತ ಯೋಗಿ ಕೌಸ್ತುಭ, ಸತ್ಕರ್ಮ ತಪಸ್ವಿ, ಪರಮಪೂಜನೀಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ತಪೋ ಭೂಮಿಯಾಗಿದೆ. ಶ್ರೀ ಸ್ವಾಮೀಜಿಯವರು ಸನಾತನ ಹಿಂದೂ ಧರ್ಮದ ಪುನರುಜ್ಞಾನಕ್ಕೆ ಹಾಗೂ ಹಿಂದು ಸಮಾಜದ ಏಳಿಗೆಗೆ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದಾರೆ. ದೀನ ದಲಿತರು ದುರ್ಬಲರಿಗೆ ದಾರಿದೀವಿಗೆಯಾಗಿದ್ದಾರೆ.

ಶ್ರೀ ಗಳ ಕ್ಷೇತ್ರದಲ್ಲಿ 48 ದಿನಗಳ ಕಾಲ ನಿರಂತರವಾಗಿ ವರಮಹಾಲಕ್ಷ್ಮಿ ವೃತಾಚರಣೆ ಪೂಜೆ ನಡೆಯುತ್ತಿದ್ದು, ಇದರ ಜೊತೆಗೆ 25 ವರ್ಷಗಳನ್ನು ಪೂರೈಸಿ ಬೆಳ್ಳಿ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದಿಂದ ಬೃಹತ್ ಹೊರಕಾಣಿಕೆಯ ಜೊತೆಗೆ ದೇಣಿಗೆ ಸಮರ್ಪಿಸಬೇಕೆಂದು ಮಾಡಿದ ಸಂಕಲ್ಪದಂತೆ ಆ.20 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಿಂದ ಬೃಹತ್ ಹೊರೆಕಾಣಿಕೆಯನ್ನು ಮೆರವಣಿಗೆ ಮೂಲಕ ಶ್ರೀಕ್ಷೇತ್ರಕ್ಕೆ ಒಪ್ಪಿಸಲಾಗುವುದು. ಈ ನಿಟ್ಟಿನಲ್ಲಿ ಆ.18 ರಂದು ಹೊರೆಕಾಣಿಕೆ ಸ್ವೀಕೃತಿ ಕೌಂಟರ್ ತೆರೆಯಲಾಗುವುದು ಭಕ್ತರು ಹೊರೆಕಾಣಿಕೆ ಸಮರ್ಪಣೆ ಮಾಡುವಂತೆ ಅವರು ವಿನಂತಿಸಿದರು.
ಹೊರೆಕಾಣಿಕೆ ಸಮಿತಿ ಸಂಚಾಲಕ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ಹಿಂದೂ ಧಾರ್ಮಿಕ ಭಾವನೆಯಲ್ಲಿ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪೂರಕವಾಗಿ ಹೊರೆಕಾಣಿಕೆ ಸಮರ್ಪಣೆ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ 48 ದಿನಗಳ ಕಾಲ ನಡೆಯುವ ಪೂಜೆಯಲ್ಲಿ ಹಲವು ಖರ್ಚುಗಳಿವೆ. ಈ ನಿಟ್ಟಿನಲ್ಲಿ ಕ್ಷೇತ್ರಕ್ಕೆ ಪುತ್ತೂರು ಸಮಿತಿಯಿಂದ 5 ಲಕ್ಷವನ್ನು ಆರ್ಥಿಕ ರೂಪದಲ್ಲಿ ನೀಡಲಾಗುತ್ತದೆ. ಉಳಿದಂತೆ ಇಲ್ಲಿ ಯಾರಿಗೂ ಹೊರೆಯಾಗದ ರೀತಿಯಲ್ಲಿ ಹೊರೆಕಾಣಿಕೆ ಸ್ವೀಕರಿಸಲಾಗುವುದು. ಭಕ್ತರು ಮತ್ತು ಕ್ಷೇತ್ರದ ಅಭಿಮಾನಿಗಳು ಸ್ವಯಂ ಪ್ರೇರಿತವಾಗಿ ಹೊರೆಕಾಣಿಕೆ ಸಮರ್ಪಣೆ ಮಾಡುವಂತೆ ವಿನಂತಿಸಿದರು. ಆ.18ರಂದು ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯ ಬಳಿಯಲ್ಲಿ ಹೊರೆಕಾಣಿಕೆ ಸ್ವೀಕೃತಿಯ ಕೌಂಟರ್ ತೆರೆಯಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೊರೆಕಾಣಿಕೆ ಸಮಿತಿ ಪುತ್ತೂರು ವಲಯ ಸಮಿತಿ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಕಾರ್ಯಾಧ್ಯಕ್ಷ ಲಕ್ಷ್ಮಣ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.