ಚಂದ್ರಯಾನ-3 ನೌಕೆಯಿಂದ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಬೇರ್ಪಟ್ಟಿದೆ. ಈ ಸಂತಸದ ಸುದ್ದಿಯನ್ನು ಇಸ್ರೋ ಖಚಿತಪಡಿಸಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿದೆ.
ವಿಕ್ರಮ್ ಲ್ಯಾಂಡರ್ ಅನ್ನು ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ಸುಮಾರು 1600 ಗಂಟೆಗಳವರೆಗೆ ಯೋಜಿಸಲಾದ ಚಂದ್ರಯಾನ-3 ನಾಳೆ ಚಂದ್ರನ ಬಳಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂದು ಸ್ಪಷ್ಟಪಡಿಸಿದೆ. ಭಾರತದ ಬಾಹ್ಯಕಾಶ ವಿಜ್ಞಾನಿಗಳ ಸರ್ವ ಪ್ರಯತ್ನಗಳಿಗೆ ಸರಿಯಾದ ಸ್ಪಂದನೆ ಸಿಕ್ಕಿದ್ದು, ಚಂದ್ರನಲ್ಲಿ ವಿಕ್ರಮ್ ಲ್ಯಾಂಡರ್ ಸೇಫ್ ಲ್ಯಾಂಡ್ ಆಗುವ ಭರವಸೆ ಹೆಚ್ಚಾಗಿದೆ.
ಕಳೆದ ಜುಲೈ 14ರಂದು ಉಡಾವಣೆಯಾಗಿದ್ದ ಚಂದ್ರಯಾನ-3 ತನ್ನ ಯಶಸ್ವಿ ಪ್ರಯಾಣವನ್ನು ಮುಂದುವರಿಸಿದೆ. ಆಗಸ್ಟ್ 5ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ ಚಂದ್ರಯಾನ 3, ಆಗಸ್ಟ್ 16ರಂದು ಚಂದ್ರನ 5ನೇ ಹಾಗೂ ಅಂತಿಮ ಕಕ್ಷೆಯನ್ನು ಪ್ರವೇಶಿಸಿದೆ. ಎಲ್ಲಾ ಅಂದುಕೊಂಡತೆ ಆದರೆ ಇದೇ ಆಗಸ್ಟ್ 23ರಂದು ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಆಗಲಿದೆ.
ಚಂದ್ರಯಾನ-3 ನೌಕೆಯಿಂದ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಬೇರ್ಪಟ್ಟಿದ್ದು, ಆಗಸ್ಟ್ 23ರ ಸಂಜೆ 5.45ಕ್ಕೆ ಚಂದ್ರನ ಮೇಲ್ಮೈನ ಮೇಲೆ ಸಾಫ್ಟ್ ಲ್ಯಾಂಡ್ ಆಗಲಿದೆ. ಚಂದ್ರಯಾನ-3ನಲ್ಲಿ ಒಟ್ಟು 6 ಪೇಲೋಡ್ಗಳನ್ನ ಕಳುಹಿಸಲಾಗಿದೆ. ಚಂದ್ರನಲ್ಲಿ ಇರುವ ಮಣ್ಣಿನ ಅಧ್ಯಯನ ನಡೆಸಲು ಇದು ಉಪಯುಕ್ತ. ಜೊತೆಗೆ ಚಂದ್ರನ ಕಕ್ಷೆಯಿಂದ ಭೂಮಿಯ ಚಿತ್ರಗಳನ್ನ ತೆಗೆಯಲಿವೆ. ಒಟ್ಟು 14 ದಿನಗಳ ಮಿಷನ್ ಇದಾಗಿದ್ದು, ಈ ವೇಳೆ ಹಲವು ಅಧ್ಯಯನಗಳು ನಡೆಯಲಿವೆ. ಚಂದ್ರನ ವಾತಾವರಣ, ಅಲ್ಲಿರುವ ಖನಿಜ ಸಂಪತ್ತು, ಎಲ್ಲದರ ಅಧ್ಯಯನ ನಡೆಯಲಿದೆ.
