ಬಂಟ್ವಾಳ : ಪಡಿತರ ಅಕ್ಕಿಯಲ್ಲಿ ಅವ್ಯವಹಾರ ನಡೆದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ಆಹಾರ & ನಾಗರಿಕ ಸರಬರಾಜು ನಿಗಮ ಮಂಗಳೂರು ಕಚೇರಿಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶರತ್ ಕುಮಾರ್ ಹೊಂಡಾ ರವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಕರ್ನಾಟಕ ಆಹಾರ & ನಾಗರಿಕ ಸರಬರಾಜು ನಿಗಮ ಗೋದಾಮಿನ ನಿರ್ವಾಹಕರಾಗಿದ್ದ ಕಿರಿಯ ಸಹಾಯಕ ವಿಜಯ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳ್ಳಿಗೆ ಗ್ರಾಮದ ಕೆಎಸ್ ಆರ್ ಟಿಸಿ ಡಿಪೋ ಎದುರುಗಡೆ ಸಗಟು ಗೋದಾಮುವಿನಿಂದ ಬಂಟ್ವಾಳ ನಗರಕ್ಕೆ ಪಡಿತರ ಅಕ್ಕಿ ಸರಬರಾಜು ಆಗುತ್ತಿರುತ್ತದೆ. ಪಡಿತರ ವಿತರಣೆಯು ವಿಳಂಬವಾಗುತ್ತಿರುವ ಬಗ್ಗೆ ಅನುಮಾನ ಬಂದು ಜಿಲ್ಲಾ ವ್ಯವಸ್ಥಾಪಕರ ಮೌಖಿಕ ಆದೇಶದ ಮೇಲೆ ಆ.17 ರಂದು ಬಂಟ್ವಾಳದ ಸಗಟು ಮಳಿಗೆಗೆ ಬಂದು ದಾಸ್ತಾನು ಪರಿಶೀಲಿಸಲಾಗಿ, ಫಿಸ್ಟ್ ತಂತ್ರಾಂಶದ ಪ್ರಕಾರ ಸಗಟು ಮಳಿಗೆಯಲ್ಲಿ ಇರಬೇಕಾಗಿದ್ದ ಭೌತಿಕ ದಾಸ್ತಾನುವಿಗಿಂತ ಅಂದಾಜು 1,32,36,030/- ರೂ ಮೌಲ್ಯದ 3892 ಕ್ವಿಂಟಾಲ್ ಅಕ್ಕಿ ಕೊರತೆ ಇರುವುದು ಕಂಡು ಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ 409 ಐಪಿಸಿ ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























