ಬಂಟ್ವಾಳ : ಹಿಂದು ಜಾಗರಣ ವೇದಿಕೆ ಮಂಗಳೂರು ಜಿಲ್ಲೆ ವತಿಯಿಂದ ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣದ ಬಳಿ ಗೌರಿಬಿದನೂರಿನಲ್ಲಿ ಅಖಂಡ ಸಂಕಲ್ಪ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ್ ಸತೀಶ್ ದಾವಣಗೆರೆ ರನ್ನು ಬಂಧಿಸಿದ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಹಿಂ.ಜಾ.ವೇ. ಜಿಲ್ಲಾ ಸಂಯೋಜಕರಾದ ನರಸಿಂಹ ಮಾಣಿ ಮತ್ತು ರಾಮದಾಸ್ ಬಂಟ್ವಾಳ ಮಾತನಾಡಿದರು.
ವಿಟ್ಲದಲ್ಲಿ ಗೋ ಸಾಗಾಟದ ವ್ಯಕ್ತಿಗೆ ಹಲ್ಲೆ ನಡೆಸಿದ್ದಾಗಿ ಆರೋಪಿಸಿ ಹಿಂದೂ ಯುವಕರ ಮೇಲೆ ಪ್ರಕರಣ ದಾಖಲಿಸಿದ್ದನ್ನು ಹಾಗೂ ಸ್ವಾತಂತ್ರ್ಯೋತ್ಸವದಲ್ಲಿ ವೀರ ಸಾವರ್ಕರ್ ಘೋಷಣೆ ಕೂಗಿದ ಶಿಕ್ಷಕಿಯನ್ನು ಕ್ಷಮೆ ಕೇಳಿಸಿದ ವಿಚಾರವನ್ನು ಪ್ರತಿಭಟನೆ ಖಂಡಿಸಲಾಯಿತು.

ಪ್ರಮುಖರಾದ ರವಿರಾಜ್ ಬಿ.ಸಿ.ರೋಡ್, ರತ್ನಾಕರ ಶೆಟ್ಟಿ, ಮಂಗಳೂರು ಮಹಾನಗರ ಜಿಲ್ಲಾ ಮತ್ತು ಗ್ರಾಮಾಂತರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ, ಜಿಲ್ಲಾ ಪ್ರಮುಖರಾದ ಸಮಿತ್ ರಾಜ್, ಪ್ರಕಾಶ್ ಕುಂಪಲ, ಅರುಣ್ ಸಜೀಪ, ಗಣೇಶ್ ಕೆದಿಲ, ಬಾಲಕೃಷ್ಣ ಕಲಾಯಿ, ರವಿ ಕೆಂಪುಗುಡ್ಡೆ, ಪ್ರಶಾಂತ್ ಇರಾ, ಕೇಶವ ದೈಪಲ, ತಾಲೂಕು ಕಾರ್ಯಕರ್ತರು ಮತ್ತು ಪರಿವಾರದ ಪ್ರಮುಖರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


























