ಪುತ್ತೂರು : ಮಹಿಳೆಯರಿಬ್ಬರ ಮೇಲೆ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಭೀರ ಗಾಯಗೊಂಡ ಮಹಿಳೆ ಸುರೇಖಾ ರವರ ಮಗ ರವಿಚಂದ್ರ ನೀಡಿದ ದೂರಿನ ಮೇರೆಗೆ ಸುರೇಶ್ ನಾಯ್ಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಪುತ್ತೂರು ಬಡಗನ್ನೂರು ಗ್ರಾಮ ನಿವಾಸಿಯಾದ ರವಿಚಂದ್ರ ಸುಮಾರು 9 ವರ್ಷಗಳಿಂದ ತನ್ನ ಚಿಕ್ಕಮ್ಮ ಸುರೇಖಾ ರವರನ್ನು ನೋಡಿಕೊಂಡು ಅವರೊಟ್ಟಿಗೆ ವಾಸವಾಗಿದ್ದು, ಆ.22 ರಂದು ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದು, ಮಧ್ಯಾಹ್ನ ಕೆಲಸ ಮುಗಿಸಿ ವಾಪಾಸು ಮನೆಗೆ ಬಂದಾಗ ಚಿಕ್ಕಮ್ಮನ ಮೊಬೈಲ್ ಮನೆಯ ಸಿಟೌಟ್ ನಲ್ಲಿ ರಿಂಗ್ ಆಗುತ್ತಿದ್ದು, ಕರೆಯನ್ನು ಸ್ವೀಕರಿಸಿದಾಗ ನೆರೆ ಮನೆಯವರು ಕರೆ ಮಾಡಿ ನಿಮ್ಮ ತೋಟದಲ್ಲಿ ಇಬ್ಬರು ಹೆಂಗಸರು ಬಿದ್ದಿದ್ದು, ನಾಯಿಗಳು ಕೂಡ ಬೊಗಳುತ್ತಿವೆ ಎಂದು ತಿಳಿಸಿದ್ದು, ಕೂಡಲೇ ತೋಟದ ಕಡೆಗೆ ಓಡಿಕೊಂಡು ಹೋಗುತ್ತಿರುವ ವೇಳೆ ಎದುರಿನಿಂದ ದಾರಿಯಲ್ಲಿ ಮನೆಗೆ ಕೆಲವೊಮ್ಮೆ ಕೆಲಸಕ್ಕೆ ಬರುತ್ತಿದ್ದ ಸುರೇಶ್ ನಾಯ್ಕ ಎಂಬಾತನು ಬರುತ್ತಿರುವುದನ್ನು ನೋಡಿದ್ದು, ತೋಟಕ್ಕೆ ಹೋಗಿ ನೋಡಿದಾಗ ಕೆಲಸದ ಮಹಿಳೆ ಗಿರಿಜಾ ಎಂಬವರ ಕುತ್ತಿಗೆಯನ್ನು ಟವೆಲ್ ನಿಂದ ಬಿಗಿಯಾಗಿ ಕಟ್ಟಿರುವುದು ಕಂಡುಬಂದಿರುತ್ತದೆ. ಹಾಗೆಯೇ ಸುರೇಖಾ ಕೂಡ ಗಂಭೀರ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿರುತ್ತಾರೆ.
ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುವ ವೇಳೆ ಎಚ್ಚರವಾದ ಸುರೇಖಾ ರವರಲ್ಲಿ ಘಟನೆಯ ಬಗ್ಗೆ ವಿಚಾರಿಸಿದಾಗ ಸುರೇಶ್ ನಾಯ್ಕ ಎಂಬಾತನು ಸುರೇಖಾ ಮನೆಯಲ್ಲಿದ್ದ ನಗದು ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ಸುರೇಖಾ ಹಾಗೂ ಕೆಲಸದ ಮಹಿಳೆ ಗಿರಿಜಾ ರವರಿಗೆ ಹಲ್ಲೆ ನಡೆಸಿ, ಟವೆಲ್ ನಿಂದ ಕುತ್ತಿಗೆಯನ್ನು ಬಿಗಿದು ಹಣ ಹಾಗೂ ಚಿನ್ನಾಭರಣಗಳ ಬಗ್ಗೆ ವಿಚಾರಿಸಿ, ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅಕ್ರ 77-2023 ಕಲಂ: 394 ಐ ಪಿ ಸಿ. ಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ..

























