ಪುತ್ತೂರು : ತಾಲೂಕು ಬಡಗನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಸುಳ್ಯ ಪದವು ಗ್ರಾಮಾಂತರ ಪ್ರದೇಶಗಳಲ್ಲಿ ಕೇರಳದಿಂದ ಅಕ್ರಮವಾಗಿ ಬಡಗನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ರಸ್ತೆಗಳಲ್ಲಿ ಕೆಂಪು ಕಲ್ಲು ಸಾಗಾಟ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ದೂರುಗಳು ಕಚೇರಿಗೆ ಸ್ವೀಕೃತವಾದ ಹಿನ್ನೆಲೆಯಲ್ಲಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಗಳೂರು ಇದರ ಉಪನಿರ್ದೇಶಕರು ಆದೇಶಿಸಿದ್ದು, ಅದರಂತೆ, ಭೂ ವಿಜ್ಞಾನಿಯವರು ಅವರ ಸಿಬ್ಬಂದಿಗಳೊಂದಿಗೆ 5.5. 2018 ರಂದು ಬಡಗನ್ನೂರು ಗ್ರಾಮದ ಪಂಚಾಯತ್ ಹತ್ತಿರ ತಲುಪಿದಾಗ ಪಂಚಾಯತಿನಿಂದ ಸುಮಾರು 200 ಮೀಟರ್ ದೂರದಲ್ಲಿ ಬರುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ, ಆ ವಾಹನದಲ್ಲಿ ಕೆಂಪು ಕಲ್ಲು / ಮುರಕಲ್ಲು ತುಂಬಿಸಿರುವುದು ಕಂಡುಬಂದಿರುತ್ತದೆ. ನಂತರ ಲಾರಿ ಚಾಲಕನನ್ನು ವಿಚಾರಿಸಿದಾಗ, ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲನ್ನು ಸಾಗಾಣಿಕೆ ಮಾಡುತ್ತಿರುವುದು ದೃಢಪಟ್ಟಿರುವುದಾಗಿ,ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತಿಳಿಸಿ, ಲಾರಿಯನ್ನು ವಶಪಡಿಸಿ, ಲಾರಿ ಚಾಲಕ ಪುಷ್ಪರಾಜ್ ಮತ್ತು ಲಾರಿ ಮಾಲೀಕ ಗಂಗಾಧರ ಸುವರ್ಣ ರವರ ವಿರುದ್ಧ ದೂರನ್ನು ದಾಖಲಿಸಿದ್ದರು.
ಆರೋಪಿಗಳು ತಮ್ಮ ಪರ ವಕೀಲರಾದ ಮಹೇಶ್ ಕಜೆ ಅವರ ಮುಖಾಂತರ ಪುತ್ತೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.
ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಪೂರಕವಾದ ಸಾಕ್ಷ್ಯದಾರಗಳು ಮೇಲ್ನೋಟಕ್ಕೆ ಕಂಡು ಬಂದಿರುವುದಿಲ್ಲ, ದೂರಿನಲ್ಲಿನ ವಿಳಂಬ, ಎಂಬಿತ್ಯಾದಿ ಅಂಶಗಳನ್ನು ವಾದಿಸಿದ್ದರು. ಸರಕಾರಿ ಅಭಿಯೋಜಕರು ಜಾಮೀನು ಅರ್ಜಿಗೆ ಆಕ್ಷೇಪವನ್ನು ಸಲ್ಲಿಸಿದ್ದರು. ವಾದ ವಿವಾದಗಳನ್ನು ಆಲಿಸಿದ ಪುತ್ತೂರಿನ ಮಾನ್ಯ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್ ವಿ ರವರು ಆರೋಪಿಗಳಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.


























