ಉಳ್ಳಾಲ : ಸ್ನೇಹಿತರ ಜೊತೆ ಸ್ನಾನಕ್ಕೆಂದು ತೆರಳಿ ಕೊಳಕ್ಕೆ ಇಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕರ್ನಾಟಕ- ಕೇರಳ ಗಡಿ ಭಾಗದ ಕೆಳಗಿನ ತಲಪಾಡಿ ಬಳಿ ಸಂಭವಿಸಿದೆ.
ಕೇರಳದ ಹೊಸಂಗಡಿ ದುರ್ಗಿಪಳ್ಳ ನಿವಾಸಿ ಹರಿಪ್ರಸಾದ್ ಆಚಾರ್ಯ (36) ಮೃತರು.
ತಲಪಾಡಿಯ ಖಾಸಗಿ ಜಾಗದಲ್ಲಿರುವ ಕೊಳಕ್ಕೆ ಸ್ನಾನಕ್ಕೆಂದು ಬಂದಿದ್ದ ನಾಲ್ವರ ಪೈಕಿ ಹರಿಪ್ರಸಾದ್ ನೀರಿನಡಿಯ ಕೆಸರಿನಲ್ಲಿ ಸಿಲುಕಿ ಮುಳುಗಿದ್ದಾರೆ. ಇದರಿಂದಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮಂಗಳೂರಿನಿಂದ ಅಗ್ನಿಶಾಮಕದಳದವರು ತೆರಳಿ ಕಾರ್ಯಾಚರಣೆ ನಡೆಸಿ ಮೃತದೇಹ ಮೇಲಕ್ಕೆತ್ತಿದ್ದಾರೆ. ಮೃತರು ವೆಲ್ಡಿಂಗ್ ವೃತ್ತಿ ನಡೆಸುತ್ತಿದ್ದರು.
ಹರಿಪ್ರಸಾದ್ ಆಚಾರ್ಯ ಅವರು ಅವಿವಾಹಿತರಾಗಿದ್ದು, ತಾಯಿ, ಸಹೋದರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.


























