ನವದೆಹಲಿ : ಚಂದ್ರಯಾನ-3 ರ ಯಶಸ್ಸಿನ ನಂತರ ಭಾರತವು ಸೂರ್ಯಯಾನ ಆದಿತ್ಯ ಎಲ್-1 ಅನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇಂದಿನಿಂದ ಆದಿತ್ಯ-ಎಲ್1 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಬೆಳಗ್ಗೆ 11:50 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ನೌಕೆ ಉಡಾವಣೆಯಾಗಲಿದೆ.
ಇಸ್ರೋ ಈ ಹೊಸ ಯೋಜನೆ ಬಗೆಗೆ ಕೇವಲ ಭಾರತ ಮಾತ್ರವಲ್ಲದೇ ಇಡೀ ವಿಶ್ವದಲ್ಲಿ ಆಸಕ್ತಿ ಹೆಚ್ಚಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ತಿಳಿಸಿದ್ದಾರೆ. ಸಾಕಷ್ಟು ಸವಾಲುಗಳ ಮಧ್ಯೆ ಉಡಾವಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿಗೆ ಎಂದು ಅವರು ಹೇಳಿದ್ದಾರೆ.
ಮಾಹಿತಿಗಳ ಪ್ರಕಾರ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯನ್ನು ಸೌರ ಕರೋನ (ಸೂರ್ಯನ ಹೊರಗಿನ ಪದರಗಳು) ದೂರದ ವೀಕ್ಷಣೆಗಾಗಿ ಮತ್ತು ಎಲ್-1ನಲ್ಲಿ (ಲಾಗ್ರಾಂಜಿಯನ್ ಪಾಯಿಂಟ್ -1) ಸೌರ ಮಾರುತದ ಸ್ಥಳ ವೀಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಎಲ್-1 ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿದ್ದು, ಇದೊಂದು ಕಷ್ಟಕರ ಯೋಜನೆಯೂ ಆಗಿದೆ.
ಏನಿದು ಎಲ್1 ಪಾಯಿಂಟ್..!??
ಸೂರ್ಯನ ಗುರುತ್ವಾಕರ್ಷಣೆ ಹಾಗೂ ಭೂಮಿಯ ಗುರುತ್ವಾಕರ್ಷಣೆ ಸಮ ಪ್ರಮಾಣದಲ್ಲಿ ಇರುವ 5 ಸ್ಥಳಗಳು ಭೂಮಿಯ ಕಕ್ಷೆಯಲ್ಲಿ ಸಿಗುತ್ತವೆ. ಇದನ್ನು ಲಾಗ್ರಾಂಜಿಯನ್ ಪಾಯಿಂಟ್ ಎಂದು ಕರೆಯಲಾಗುತ್ತದೆ. ಈ ಪೈಕಿ ಲಾಗ್ರಾಂಜಿಯನ್ ಪಾಯಿಂಟ್ 1ರಲ್ಲಿ ಭಾರತದ ಸೌರ ಅಧ್ಯಯನ ಉಪಗ್ರಹ ನಿಲ್ಲಲಿದೆ. ಬಾಹ್ಯಾಕಾಶಕ್ಕೆ ಕಳುಹಿಸಲಾಗುವ ವಸ್ತುಗಳು ಸ್ಥಳದಲ್ಲಿಯೇ ಇರುವಂತೆ ಮಾಡಲಾಗುತ್ತದೆ.
ಈ ಮಿಷನ್‌ನಿಂದ ಏನು ಪ್ರಯೋಜನ.!!??
ಇಸ್ರೋ ಪ್ರಕಾರ, ಸೂರ್ಯನು ನಮಗೆ ಹತ್ತಿರದ ನಕ್ಷತ್ರ. ಇದು ನಕ್ಷತ್ರಗಳ ಅಧ್ಯಯನದಲ್ಲಿ ನಮಗೆ ಹೆಚ್ಚು ಸಹಾಯ ಮಾಡುತ್ತದೆ. ಇದರಿಂದ ಪಡೆದ ಮಾಹಿತಿಯು ಇತರ ನಕ್ಷತ್ರಗಳು, ನಮ್ಮ ನಕ್ಷತ್ರಪುಂಜ ಮತ್ತು ಅನೇಕ ರಹಸ್ಯಗಳು ಮತ್ತು ಖಗೋಳಶಾಸ್ತ್ರದ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸೂರ್ಯನು ನಮ್ಮ ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿದ್ದಾನೆ. ಆದಿತ್ಯ ಎಲ್-1 ಈ ದೂರದಲ್ಲಿ ಕೇವಲ ಒಂದು ಪ್ರತಿಶತವನ್ನು ಮಾತ್ರ ಕ್ರಮಿಸುತ್ತಿದೆ. ಇದು ಸೂರ್ಯನ ಬಗ್ಗೆ ಅಂತಹ ಅನೇಕ ಮಾಹಿತಿಯನ್ನು ನೀಡುತ್ತದೆ. 4 ತಿಂಗಳುಗಳ ಕಾಲ ಉಪಗ್ರಹ ಕ್ರಮಿಸಿ, ಕಾಯಾಚರಣೆ ನಡೆಸಲಿದೆ. ಇದು 5 ವರ್ಷ ಆಯಸ್ಸನ್ನು ಹೊಂದಿದೆ.


























