ಸವಣೂರು : ತಿಂಗಳ ಹಿಂದೆ ಮೃತರಾಗಿದ್ದ ಪತಿಯ ಅಗಲುವಿಕೆಯ ನೋವಿನಿಂದ ಹೊರಬರಲಾರದೇ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸವಣೂರು ಗ್ರಾಮದ ಪೆರಿಯಡ್ಕ ದಿ.ದಿನೇಶ್ ಪೆರಿಯಡ್ಕ ಅವರ ಪತ್ನಿ ರೂಪಾ (30) ಮೃತರು.
ರೂಪಾ ಅವರು ಮೂಲತಃ ಕೊಡಗು ಜಿಲ್ಲೆಯ ಪೆರಾಜೆಯ ಹೊದ್ದೆಟ್ಟಿಯವರು.
ಎರಡು ವರ್ಷಗಳ ಹಿಂದೆ ಅವರನ್ನು ಸವಣೂರಿನ ಪೆರಿಯಡ್ಕದ ದಿನೇಶ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ದಿನೇಶ್ ಪೆರಿಯಡ್ಕ ಅವರು ಅನಾರೋಗ್ಯದಿಂದ ಆ.7ರಂದು ನಿಧನ ಹೊಂದಿದ್ದರು. ಇದಾದ ಬಳಿಕ ರೂಪಾ ತವರು ಮನೆ ಪೆರಾಜೆಗೆ ಹೋಗಿದ್ದರು. ಅಲ್ಲಿ ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚೂಡಿದಾರ ಶಾಲು ಬಳಸಿ ನೇಣಿಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತರಲಾಗಿದ್ದು, ಕೊಡಗು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.