ಉಡುಪಿ : ಕೃಷ್ಣಜನ್ಮಾಷ್ಟಮಿ ತಯಾರಿಗಳು ಕೃಷ್ಣ ನಗರಿ ಉಡುಪಿಯಲ್ಲಿ ಜೋರಾಗಿಯೇ ನಡೆಯುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಉಡುಪಿಯ ಸಮಾಜ ಸೇವಕ ರವಿ ಕಟಪಾಡಿ ವಿಶಿಷ್ಟ ವೇಷದೊಂದಿಗೆ ಜನರ ಮನರಂಜಿಸಲು ತಯಾರಾಗಿದ್ದಾರೆ.
ಈ ಬಾರಿ ರವಿ ಕಟಪಾಡಿ ಅವರು ಸೀ ಪೋಕ್ ಎಂಬ ಆಂಗ್ಲ ಚಲನಚಿತ್ರದ ವೇಷವನ್ನು ಧರಿಸಲಿದ್ದು, ಉದ್ಯಾವರ, ಉಡುಪಿ,ಮಲ್ಪೆ, ಪಡುಕೆರೆ ಮತ್ತು ಇತರ ಪ್ರದೇಶಗಳಲ್ಲಿ ರವಿ ಕಟಪಾಡಿ ಫ್ರೆಂಡ್ಸ್ ತಂಡ ತಿರುಗಾಟ ನಡೆಸಿ ಜನರನ್ನು ರಂಜಿಸಲಿದ್ದಾರೆ.
ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಕುಂದಾಪುರ ಮೂಲದ 2 ವರ್ಷದ ಮಗುವಿನ ಚಿಕಿತ್ಸೆಗೆ ಹಣವನ್ನು ನೀಡಲು ರವಿ ಕಟಪಾಡಿ ನಿರ್ಧಾರ ಮಾಡಿದ್ದು, ಆದರೆ ಈ ಬಾರಿ ರವಿ ಕಟಪಾಡಿ ಫ್ರೆಂಡ್ಸ್ ತಂಡ ಜನರ ಬಳಿಗೆ ಹೋಗಿ ಬಾಕ್ಸ್ ಗಳನ್ನು ಹಿಡಿದು ಹಣವನ್ನು ಸಂಗ್ರಹ ಮಾಡದೇ ಇರಲು ನಿರ್ಧರಿಸಿದೆ.
ಈ ಕುರಿತು ಉಡುಪಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ರವಿ ಕಟಪಾಡಿ ಅವರು “ಕಳೆದ 8 ವರ್ಷಗಳಿಂದ ಸುಮಾರು 113 ಮಕ್ಕಳಿಗೆ ಸುಮಾರು 1ಕೋಟಿಗೂ ಮಿಕ್ಕಿ ಧನಸಹಾಯ ಮಾಡಿದ್ದು, ಇದರ ಸಂತೃಪ್ತಿ ನಮಗಿದೆ. ಆದರೆ 47 ವರ್ಷದ ಬಳಿಕ ಈ ಬಾರಿ ನಾನು ನನ್ನ ಸ್ವಂತ ಮನೆ ಕಟ್ಟುವ ಕಾರ್ಯವನ್ನು ಪ್ರಾರಂಭ ಮಾಡಿದ್ದೇನೆ. ಆದರೆ ನನ್ನದೇ ಊರಿನ ಕೆಲವೊಂದು ಜನರು ನಾನು ವೇಷ ಹಾಕಿ ಬಂದ ಹಣದಲ್ಲಿ 1 ಕೋಟಿ ಮೌಲ್ಯದ ಮನೆ ನಿರ್ಮಾಣ ಮಾಡುತ್ತಿದ್ದೇನೆ ಎಂದು ಆರೋಪ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಈ ಬಾರಿ ವೇಷ ಹಾಕಿದರೂ ಕೂಡಾ ಜನರ ಬಳಿಗೆ ತೆರಳಿ ಬಾಕ್ಸ್ ನಲ್ಲಿ ಹಣ ಸಂಗ್ರಹ ಮಾಡುವುದಿಲ್ಲ. ಬದಲಾಗಿ ಯಾರಿಗಾದರೂ ನಮ್ಮ ಉದ್ದೇಶಕ್ಕೆ ಸಹಕಾರ ನೀಡಲು ಇಚ್ಛಿಸಿದ್ದಲ್ಲಿ ನಮ್ಮ ವಾಹನದ ಬಳಿಗೆ ಬಂದು ತಮ್ಮ ಧನಸಹಾಯವನ್ನು ನೀಡಬಹುದು. ಇದು ನಮ್ಮ ರವಿ ಫ್ರೆಂಡ್ಸ್ ಕಟಪಾಡಿ ತಂಡದ ನಿರ್ಧಾರ” ಎಂದರು.
ಈ ಸಂದರ್ಭದಲ್ಲಿ ತಂಡದ ಮಾರ್ಗದರ್ಶಕರಾದ ಮಹೇಶ್ ಶೆಣೈ, ಮೊಹಮ್ಮದ್ ರಮೀಜುಲ್ಲಾ, ವಿಶ್ವಾಸ್ ಉಪಸ್ಥಿತರಿದ್ದರು.