ಉಡುಪಿ: ರಾಜ್ಯಾದ್ಯಂತ ಕೃಷ್ಣಜನ್ಮಾಷ್ಟಮಿಯ ಸಂಭ್ರಮ ಮೂಡಿದ್ದು, ಅದರಲ್ಲೂ ದೇವಾಲಯಗಳ ನಗರಿ ಉಡುಪಿಯ ಶ್ರೀಕೃಷ್ಣ ಮಠ ಹಬ್ಬದ ರಂಗಿನಿಂದ ಕಂಗೊಳಿಸಿದೆ.
ದೇಗುಲದ ತುಂಬೆಲ್ಲಾ ವಿಶೇಷ ಅಲಂಕಾರ, ಭಕ್ತರಿಂದ ಜಪ ತಪ, ಪುರದ ತುಂಬ ಹುಲಿ ವೇಷಗಳ ಕಲರವ, ಕಡೆಗೋಲು ಕೃಷ್ಣನ ನಗರಿಯಲ್ಲಿ ಎರಡು ದಿನ ಸಂಭ್ರಮ ಮನೆಮಾಡಿದೆ.
ಇಂದು ರಥಬೀದಿಯಲ್ಲಿ ಕೃಷ್ಣ ಲೀಲೋತ್ಸವ – ಮೊಸರುಕುಡಿಕೆ ಆಚರಣೆ ನಡೆಯಲಿದೆ. ಶ್ರೀ ಕೃಷ್ಣಮಠವು ವಿಶೇಷ ಹೂವಿನ ಅಲಂಕೃತಗೊಂಡಿದ್ದು, ಇಂದು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಕೃಷ್ಣಮಠಕ್ಕೆ ಆಗಮಿಸಿ ಅಲಂಕೃತ ಬಾಲ ಕೃಷ್ಣನ ದರ್ಶನ ಪಡೆದರು. ಕೃಷ್ಣ ಜಯಂತಿಯ ಪ್ರಯುಕ್ತ ಕಡೆಗೋಲು ಕೃಷ್ಣನಿಗೆ ಮೊಸರು ಮೆಲ್ಲುತ್ತಿರುವ ಬಾಲಕೃಷ್ಣನ ವಿಶೇಷ ಅಲಂಕಾರ ಮಾಡಿದ್ದು ಗಮನ ಸೆಳೆಯಿತು.
ಚಿನ್ನದ ರಥದಲ್ಲಿ ಕೃಷ್ಣನ ಮಣ್ಣಿನ ವಿಗ್ರಹಕ್ಕೆ ಉತ್ಸವ, ಭಕ್ತರಿಗೆ ಕೃಷ್ಣನಿಗೆ ಅಪ್ರಿಸಿದ ಲಡ್ಡುಚಕ್ಕುಲಿ ಪ್ರಸಾದದ ವಿತರಣೆ ನಡೆಯಲಿದೆ.
ಮುಂಜಾನೆ ಆರು ಗಂಟೆಯಿಂದ ಜನ ನಿರಂತರವಾಗಿ ದೇವರ ದರ್ಶನ ಮಾಡುತ್ತಿದ್ದಾರೆ. ಕೃಷ್ಣ ಮಠದ ಗರ್ಭಗುಡಿ, ಅಷ್ಟಮಠವನ್ನು ವಿಶೇಷ ಹೂವುಗಳಿಂದ ಸಿಂಗಾರ ಮಾಡಲಾಗಿದೆ. ರಾತ್ರಿಯ ತನಕ ನಿರಂತರವಾಗಿ ಭಕ್ತರಿಗೆ ದೇವರ ದರ್ಶನ ಮಾಡುವ ಅವಕಾಶ ಇದೆ.
ರಥಬೀದಿಯಲ್ಲಿ ಹೊರಜಿಲ್ಲೆಗಳಿಂದ ಬಂದ 20ಕ್ಕೂ ಹೆಚ್ಚು ಮಂದಿ ಹೂ-ಹಣ್ಣಿನ ವ್ಯಾಪಾರಿಗಳು ಭರ್ಜರಿ ವ್ಯಾಪಾರ ನಡೆಸಿದರು. ಈ ಬಾರಿ ಮಳೆ ಕಡಿಮೆ ಇರುವುದು ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಯಿತು..


























