ಬೆಂಗಳೂರು : ಕಂಬಳ ಅಂದ್ರೆ ನೆನಪಿಗೆ ಬರೋದೇ ಕರಾವಳಿ. ಆದರೇ ಇದೀಗ ಅಪ್ಪಟ ತುಳುನಾಡ ಸಂಸ್ಕೃತಿಯ ಅನಾವರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಗಲಿದೆ.

ಹೌದು.. ಬೆಂಗಳೂರಿನಲ್ಲಿ ಕಂಬಳ ನಡೆಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಕರಾವಳಿಯ ಸೊಬಗು ಕಂಬಳ ನಡೆಸಲು ಸಕಲ ಯೋಜನೆ ರೂಪಿಸಲಾಗುತ್ತಿದೆ.
ಪುತ್ತೂರು ಶಾಸಕ ಹಾಗೂ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಈ ಬಾರಿ ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ.

ಈ ಹಿನ್ನೆಲೆ ಇಂದು ನವರಂಗ್ ಬ್ರಿಡ್ಜ್ ಬಳಿಯ ಸ್ವಾತಿ ಹೋಟೆಲ್ ನಲ್ಲಿ ಸಭೆ ನಡೆಯಿತು.

ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ ಸಮಿತಿ ಮಾಡುವ ಬಗ್ಗೆ ಹಾಗೂ ಬೆಂಗಳೂರಿನಲ್ಲಿ ಕರಾವಳಿ ಸೊಬಗಿನ ಬಗ್ಗೆ ತಿಳಿಯಬೇಕು. ತುಳು ಭವನ ಪ್ರತ್ಯೇಕ ಜಾಗ ಮಾಡಿ ನಿರ್ಮಾಣ ಮಾಡಬೇಕು. ಕಂಬಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು ಹೀಗೆ ಹಲವು ವಿಚಾರಗಳ ಬಗ್ಗೆ ಶಾಸಕ ಅಶೋಕ್ ರೈ ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಹಲವು ಮಂದಿ ಉದ್ಯಮಿಗಳು ಹಾಗೂ ಪುತ್ತೂರಿನಿಂದಲೂ ಹಲವು ಮಂದಿ ಆಗಮಿಸಿದ್ದರು.

ಕಂಬಳ ತುಳುನಾಡಿನ ಜಾನಪದ ಕ್ರೀಡೆ. ಒಂದು ಕಾಲದಲ್ಲಿ ಕರಾವಳಿ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಈ ಸ್ಪರ್ಧೆ ಇಂದು ತನ್ನ ಖ್ಯಾತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲೂ ಪಸರಿಸಿದೆ. ರಾಜ್ಯ ರಾಜಧಾನಿಯಲ್ಲೂ ಕಂಬಳದ ಸೊಬಗು ನೋಡಲು ದಿನಗಣನೆ ಆರಂಭವಾಗಿದೆ…



























