ಬಂಟ್ವಾಳ : ಅಕ್ರಮ ಮರ-ಮಟ್ಟುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ವಲಯ ಅರಣ್ಯಾಧಿಕಾರಿಗಳು ಆರೋಪಿ ಸಹಿತ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.
ಬಂಟ್ವಾಳದ ಬಡಗಬೆಳ್ಳೂರು ಗ್ರಾಮದ ಸಾಣೂರು ಎರ್ಮಾಳ್ ಪದವು ರಸ್ತೆಯ ಪಟ್ಟಾಜೆ ಎಂಬಲ್ಲಿ ಅಕ್ರಮವಾಗಿ ಕಾಡು ಜಾತಿಯ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ ಆರೋಪಿ ಸಹಿತ ವಾಹನ, ಮರದ ದಿಮ್ಮಿ ಮತ್ತು ಅನೇಕ ಸೊತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಅಂದಾಜು 3 ಲಕ್ಷ ಆಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಮುಂದಿನ ತನಿಖೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟೋನಿ ಎಸ್. ಮರಿಯಪ್ಪ ಅವರ ನಿರ್ದೇಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ. ಇವರ ಮಾರ್ಗದರ್ಶನದಲ್ಲಿ ವಲಯ ಅಧಿಕಾರಿ ರಾಜೇಶ್ ಬಳೆಗಾರ ಅವರು ನಡೆಸಲಿದ್ದಾರೆ.
ಕಾರ್ಯಾಚರಣೆಯಲ್ಲಿ ಬಂಟ್ವಾಳ ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳೆಗಾರ, ಉಪವಲಯ ಅರಣ್ಯಾಧಿಕಾರಿ ಯಶೋಧರ, ಗಸ್ತು ಅರಣ್ಯ ಪಾಲಕರಾದ ಜಿತೇಶ್ ಪಿ ,ಶೋಭಿತ್ ಹಾಗೂ ಇಲಾಖಾ ವಾಹನ ಹಂಗಾಮಿ ಚಾಲಕ ಜಯರಾಮ್ ಪಾಲ್ಗೊಂಡಿದ್ದರು.

























