ಹಿಂದುತ್ವದ ಹೆಸರಿನಲ್ಲಿ ಉದ್ದುದ್ದ ಭಾಷಣಗಳನ್ನು ಮಾಡಿ ನಾಡಿನಾದ್ಯಂತ ಓಡಾಡಿ ಸಾವಿರಾರು ಪ್ರಾಮಾಣಿಕ ಹಿಂದೂ ಕಾರ್ಯಕರ್ತರ, ಹಿಂದೂ ಸಂಘಟನೆಗಳ ಅಭಿಮಾನ, ಬೆಂಬಲ ಗಳಿಸಿಕೊಂಡು ಹಿಂದುತ್ವದ “ಬೆಂಕಿ ಉಂಡೆ “ಎಂದು ಬಿಂಬಿಸಿಕೊಂಡ ಚೈತ್ರ ಕುಂದಾಪುರ ವಂಚನೆಯ ಪ್ರಕರಣ ನಾಡನ್ನೇ ದಿಗ್ಭ್ರಮೆ ಗೊಳಿಸಿದೆ ಎಂದು ರಾಧಾಕೃಷ್ಣ ಅಡ್ಯಂತಾಯ ಪ್ರತಿಕ್ರಿಯಿಸಿದ್ದಾರೆ.
ಯಾರನ್ನು ನಂಬುವುದು..!?? ಹೇಗೆ ನಂಬುವುದು..!? ಎಷ್ಟು ನಂಬುವುದು..!?? ಎಂಬ ಸಂದೇಹ ಮೂಡಿಸಿದೆ. ಭಾಷಣಗಳ ಮೂಲಕ ಹಿಂದೂ ಸಮಾಜವನ್ನು ಮರಳುಗೊಳಿಸಿ ಇಂತಹ ಸಮಾಜದ್ರೋಹಿ- ವಂಚನೆಯ ಮೂಲಕ ಹಿಂದೂ ಸಮಾಜ ತಲೆತಗ್ಗಿಸುವಂತೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಹೇಳಿದ್ದಾರೆ.
ವಿವಿಧ ಸಾಮಾಜಿಕ ಸಂಘಟನೆಗಳು, ವಿಶೇಷವಾಗಿ ಹಿಂದುತ್ವವಾದಿ- ರಾಷ್ಟ್ರೀಯವಾದಿ ಸಂಘಟನೆಗಳು ಮುಂದಿನ ದಿನಗಳಲ್ಲಿ ಇಂತಹ ಸಮಾಜಕಂಟಕರ, ವಂಚಕರ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕಾದ ಅನಿವಾರ್ಯತೆ ಇದೆ . ಇಲ್ಲವಾದಲ್ಲಿ ಇಂತಹ ಗೋಮುಖವ್ಯಾಘ್ರರ ಮುಖವಾಡ ಕಳಚಿ ಬಿದ್ದಾಗ ಅಸಹ್ಯಪಟ್ಟು ನೊಂದುಕೊಳ್ಳಬೇಕಾಗುತ್ತದೆ. ಕಾರ್ಯಕರ್ತರು ಅಸಹಾಯಕರಾಗಬೇಕಾಗುತ್ತದೆ.
ಚೈತ್ರ ವಂಚನೆಯ ಪ್ರಕರಣ ಯಾವುದೇ ಕೆಟ್ಟ ಪ್ರಭಾವಕ್ಕೊಳಗಾಗದೆ ಅತ್ಯಂತ ಪ್ರಾಮಾಣಿಕವಾಗಿ ತನಿಖೆ ನಡೆದು ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಅತ್ಯಂತ ಕಠಿಣ, ಆಮೂಲಾಗ್ರ ಶಿಕ್ಷೆ ಆಗುವಂತಾಗಬೇಕೆಂದು ಅವರು ಆಗ್ರಹಿಸಿದ್ದಾರೆ.


























