ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿಯ ಸಮೀಪ ಮಾಣಿ ಗ್ರಾಮದ ಶಂಭುಗ ಗುಡ್ಡಚಾಮುಂಡಿ ಪಂಜುರ್ಲಿ ಮಲೆಕೊರತಿ ದೈವಸ್ಥಾನದ ವ್ಯಾಪ್ತಿಯ ಸುಳ್ಳಮಲೆ ಬಳ್ಳಮಲೆಯಲ್ಲಿ ಗುಹಾ ತೀರ್ಥ ಸ್ನಾನ ಇಂದಿನಿಂದ ನಡೆಯಲಿದೆ.
ವರ್ಷದಲ್ಲಿ ಈ ಗುಹೆಗೆ ಸಾರ್ವಜನಿಕರಿಗೆ ಐದು ದಿನ ಮಾತ್ರ ಪ್ರವೇಶ. ನೂರಾರು ವರ್ಷಗಳಿಂದ ಇಲ್ಲಿ ತೀರ್ಥಸ್ನಾನ ನಡೆದುಕೊಂಡು ಬಂದಿದೆ.
ಈ ಗುಹೆಯಲ್ಲಿರುವ ಪವಿತ್ರ ತೀರ್ಥಸ್ನಾನ ಮಾಡಿದರೆ, ಇಷ್ಟಾರ್ಥ ಸಿದ್ಧಿ ಎಂಬ ನಂಬಿಕೆಯೂ ಇದೆ. ಗುಡ್ಡೆಪ್ರದೇಶದಲ್ಲಿ ಇರುವ ಈ ಜಾಗ ಸಾರ್ವಜನಿಕರಿಗೆ ತೆರೆದುಕೊಳ್ಳುವುದೇ ಚೌತಿ ಸಂದರ್ಭದಲ್ಲಿ. ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಳಮಲೆ-ಬಳ್ಳಮಲೆಯ ಗುಹಾತೀರ್ಥದ ವೈಶಿಷ್ಟ್ಯ. ಇಂದಿನಿಂದ (ಸೆ.15, ಶುಕ್ರವಾರ) ಈ ವರ್ಷ ತೀರ್ಥಸ್ನಾನ ವಿಧಿ ವಿಧಾನಗಳು ಆರಂಭಗೊಳ್ಳಲಿದೆ.
ಸೋಣ (ಶ್ರಾವಣ) ಅಮವಾಸ್ಯೆಯ ಸೆ.15 ರಂದು, ಅಂದರೆ ಇಂದು ಬಿದಿರಿನ ಕೇರ್ಪು( ಏಣಿ) ಇಡುವ ಸಂಪ್ರದಾಯ ನಡೆಯಲಿದೆ. ಬಿದಿರನ ಕೇರ್ಪು ಇಡುವ ಸಂಪ್ರದಾಯದ ಬಳಿಕ ಅರಸು ಗುಡ್ಡೆಚಾಮುಂಡಿ ಮತ್ತು ಪ್ರಧಾನ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ಮೊದಲಾದ ವಿಧಿವಿಧಾನಗಳನ್ನು ನೆರವೇರಿಸಲಾಗುವುದು. ಅನಂತರ ಬಾದ್ರಪದ ಚೌತಿಯವರೆಗೆ ಅಂದರೆ, ಸೆ.19ರ ತನಕ ತೀರ್ಥ ಸ್ನಾನಕ್ಕೆ ಮುಕ್ತ ಅವಕಾಶ ಇರಲಿದೆ.
ಮಂಗಳೂರು- ಮಾಣಿ ನಡುವೆ ದಾಸಕೋಡಿ ಬಸ್ ನಿಲ್ದಾಣದಿಂದ ಸುಮಾರು ಮೂರೂವರೆ ಕಿ. ಮೀ. ದೂರದಲ್ಲಿ ಅನಂತಾಡಿಗೆ ಸಮೀಪದ ಸುಳ್ಳಮಲೆ- ಬಳ್ಳಮಲೆ ಅರಣ್ಯ ಪ್ರದೇಶದಲ್ಲಿ ಈ ಸುಳ್ಳಮಲೆ ಗುಹೆ ಇದೆ. ಆದರೆ ಇಲ್ಲಿಗೆ ಹೋಗಲು ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ವಾಹನ ವ್ಯವಸ್ಥೆ ಮಾಡಿಕೊಂಡು ಎರಡು ಕಿ.ಮೀ ಸಾಗಿದ ಬಳಿಕ ನಡೆದು ಗುಹೆಯ ಕಡೆ ಹೋಗ ಬೇಕಾಗುತ್ತದೆ. ಅರಣ್ಯ ಹಾದಿಯಲ್ಲಿ ಹೋಗಿ ಹತ್ತು ಮೀಟರ್ ಎತ್ತರದ ಬಿದಿರಿನ ಏಣಿಯಲ್ಲಿ ಇಳಿದು ಹತ್ತು ಮೀಟರ್ ಸಾಗಿದರೆ ಗುಹೆ ಸಿಗುತ್ತದೆ. ಇಲ್ಲಿ ಸ್ಥೂಲಕಾಯದವರೂ ಸಪೂರ ಶರೀರದವರೂ ಸಾಗಬಹುದಾದಂತಹ ಎರಡು ಬಂಡೆಗಳು ಇವೆ. ಬಂಡೆಗಳ ಮೇಲೆ ಹರಿದು ಬರುವ ನೀರೇ ತೀರ್ಥ. ಈ ನೀರಿನ ಮೂಲ ಯಾವುದು ಎಂಬುದು ಯಾರಿಗೂ ತಿಳಿದಿಲ್ಲ.



























