ಬೆಳ್ತಂಗಡಿ : ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ದಾಸ್ತಾನು ಮಾಡಿಟ್ಟಿರುವ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಾಳಿ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬಟ್ಲಡ್ಕ ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ಉರುವಾಲು ನಿವಾಸಿ ಸಂದೇಶ್ ಎಂಬಾತನು ಧರ್ಮಸ್ಥಳ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು, ಬಂದಾರು ಗ್ರಾಮದ ಬಟ್ಲಡ್ಕ ಎಂಬಲ್ಲಿ, ನೇತ್ರಾವತಿ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೇ, ಸರಕಾರಕ್ಕೆ ಯಾವುದೇ ರಾಜಸ್ವ ಪಾವತಿಸದೇ ಅಕ್ರಮವಾಗಿ ಮರಳು ಕಳವು ಮಾಡಿ ಸಂಗ್ರಹಿಸಿ ಇಟ್ಟಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಭೂ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಲಾಯಲ್ ಗ್ಲಾಡ್ಸನ್ಸ್ ಮಿರಾಂಡ ಎಂಬವರು, ಸೆ.15 ರಂದು ಬೆಳಿಗ್ಗೆ ಬಂದಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಬೆಳ್ತಂಗಡಿ ಕಂದಾಯ ನಿರೀಕ್ಷಕರೊಂದಿಗೆ ಸದರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸುಮಾರು 33600 ರೂ. ಮೌಲ್ಯದ ಸುಮಾರು 48 ಟನ್ ನಷ್ಟು ಮರಳನ್ನು ಕಳವು ಮಾಡಿ ಅಕ್ರಮವಾಗಿ ದಾಸ್ತಾನು ಹಾಕಿರುವುದು ಕಂಡುಬಂದಿರುತ್ತದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 66/2023 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























